ಹೊಸದಿಗಂತ ವರದಿ, ಮಂಗಳೂರು:
ಮಂಗಳೂರು ನಗರದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಮೂಲಕ ದೇಶವನ್ನೇ ಬೆಚ್ಚಿ ಬೀಳಿಸಿದ ಉಗ್ರ ಮುಹಮ್ಮದ್ ಶಾರೀಕ್ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವುದರೊಂದಿಗೆ ನಿಷೇಧಗೊಂಡಿರುವ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಜೊತೆ ಕೂಡ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ಉಗ್ರ ಶಾರೀಕ್ ಹಿನ್ನೆಲೆ ಕೆದಕ್ಕುತ್ತಿರುವ ಪೊಲೀಸರಿಗೆ ದಿನಕ್ಕೊಂದರಂತೆ ಆಘಾತಕಾರಿ ಮಾಹಿತಿಗಳು ಲಭ್ಯವಾಗುತ್ತಿವೆ.
ರಾಜ್ಯದಲ್ಲಿ ಇತ್ತೀಚೆಗೆ ಸ್ವಾತಂತ್ರ್ಯ ವೀರ ಸಾವರ್ಕರ್ ಕುರಿತಂತೆ ವಿವಾದವನ್ನು ಸೃಷ್ಟಿಸಲಾಗಿತ್ತು. ಇದೇ ಸಂದರ್ಭ ಈ ಖತರ್ನಾಕ್ ಉಗ್ರ ಶಾರೀಕ್ ಮಂಗಳೂರಿಗೆ ಎಂಟ್ರಿ ಕೊಟ್ಟಿದ್ದ. ಸಾವರ್ಕರ್ ವಿವಾದದತ್ತ ಜನತೆ ಹಾಗೂ ಆಡಳಿತ ವರ್ಗ ತಮ್ಮ ಗಮನ ಕೇಂದ್ರಿಕರಿಸುತ್ತಾರೆಂಬುದನ್ನು ಮನಗಂಡು, ಇದೇ ಸರಿಯಾದ ಸಮಯವೆಂದು ರಾಜ್ಯದಲ್ಲಿ ದೊಡ್ಡ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ಎನ್ನಲಾಗಿದೆ.
ಈ ನಿಟ್ಟಿನಲ್ಲಿಯೇ ಪಿಎಫ್‌ಐ ಪ್ರಮುಖರನ್ನು ಭೇಟಿ ಮಾಡಿದ್ದ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಆದರೆ ಪೊಲೀಸರ ಕರ್ತವ್ಯ ಪ್ರಜ್ಞೆಯಿಂದ ಅಂದು ಆತನ ಫ್ಲ್ಯಾನ್ ಯಶಕಂಡಿರಲಿಲ್ಲ. ಪೊಲೀಸರು ಶಾರೀಕ್‌ನ ಸಹಚರರಾದ ಮಾಝ್ ಮುನೀರ್ ಸೇರಿದಂತೆ ಹಲವರನ್ನು ಬಂಧಿಸಿ ಜೈಲಿಗಟ್ಟಿದ್ದರು.