November 18, 2026
Wednesday, November 18, 2026
spot_img

ಕುಲ್ಗಾಮ್‌ ಎನ್‌ಕೌಂಟರ್‌: ಸೇನೆ, ಪೊಲೀಸರ ಕಾರ್ಯಾಚರಣೆಗೆ ಅಮಿತ್ ಶಾ ಶಹಬ್ಬಾಸ್ ಗಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಶ್ಮೀರ ಕಣಿವೆಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಮತ್ತೊಂದು ಮಹತ್ವದ ಯಶಸ್ಸು ಸಿಕ್ಕಿದೆ. ಕುಲ್ಗಾಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಕಮಾಂಡರ್ ಮೊಹಮ್ಮದ್ ಲತೀಫ್ ಭಟ್ ಹತನಾಗಿದ್ದು, ಈ ಕಾರ್ಯಾಚರಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಭಾರತೀಯ ಸೇನೆ, ಸಿಆರ್‌ಪಿಎಫ್ ಹಾಗೂ ಗುಪ್ತಚರ ಸಂಸ್ಥೆಗಳ ಸಂಘಟಿತ ಕಾರ್ಯಾಚರಣೆಯಿಂದ ಕಣಿವೆಯಲ್ಲಿ ಲಷ್ಕರ್‌ನ ಕೊನೆಯ ಪರಿಚಿತ ಸಕ್ರಿಯ ಸ್ಥಳೀಯ ಉಗ್ರನನ್ನು ಹೊಡೆದುರುಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಭದ್ರತಾ ಪಡೆಗಳ ಕಾರ್ಯಾಚರಣೆಗೆ ಅಮಿತ್ ಶಾ ಮೆಚ್ಚುಗೆ

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಭದ್ರತಾ ಸಿಬ್ಬಂದಿಯ ಧೈರ್ಯ ಮತ್ತು ಸಮನ್ವಯವನ್ನು ಕೊಂಡಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಭಾರತೀಯ ಸೇನೆ, ಸಿಆರ್‌ಪಿಎಫ್ ಹಾಗೂ ಗುಪ್ತಚರ ಸಂಸ್ಥೆಗಳ ನಡುವಿನ ಅತ್ಯುತ್ತಮ ಸಹಕಾರದಿಂದ ಈ ಯಶಸ್ಸು ಸಾಧ್ಯವಾಗಿದೆ. ದೇಶವು ನಮ್ಮ ಧೈರ್ಯಶಾಲಿ ಯೋಧರಿಗೆ ಗೌರವ ಸಲ್ಲಿಸುತ್ತದೆ ಎಂದು ಹೇಳಿದ್ದಾರೆ.

ಲತೀಫ್ ಭಟ್ ಹತ್ಯೆಗೂ ಒಂದು ದಿನ ಮೊದಲು ಆತನ ಸಹಚರ ಉಮರ್ ನಿಸಾರ್ ದಾರ್ ಕೂಡ ಕುಲ್ಗಾಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ. ಈ ಎರಡೂ ಕಾರ್ಯಾಚರಣೆಗಳು ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಉಗ್ರ ನಿಗ್ರಹ ಕಾರ್ಯಾಚರಣೆಗೆ ಮಹತ್ವದ ಬಲ ನೀಡಿವೆ.

ಮಸೀದಿಯೊಳಗೆ ಅಡಗಿದ್ದ ಉಗ್ರನ ಹತ್ಯೆ

ಬುಧವಾರ ನಡೆದ ಕಾರ್ಯಾಚರಣೆ ವೇಳೆ ಲತೀಫ್ ಭಟ್ ಮಸೀದಿಯೊಳಗೆ ಅಡಗಿಕೊಂಡಿದ್ದ. ಭದ್ರತಾ ಪಡೆಗಳು ಹಲವು ಬಾರಿ ಶರಣಾಗುವಂತೆ ಮನವಿ ಮಾಡಿದರೂ ಆತ ಒಪ್ಪಿರಲಿಲ್ಲ. ಕೊನೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದಾನೆ. ಕಾರ್ಯಾಚರಣೆಯ ವೇಳೆ ಮಸೀದಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Must Read

Skip to toolbar