ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಕ್ಕೆ ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಪುಣ್ಯ ನದಿ ಕುಮಾರಧಾರ ಮೈದುಂಬಿ ಹರಿಯುತ್ತಿದೆ.
ಬಾರೀ ಮಳೆಗ ಸ್ನಾನಘಟ್ಟವು ಸಂಪೂರ್ಣ ಪ್ರವಾಹ ಸದೃಶ್ಯವಾಗಿದೆ.ಕುಮಾರಧಾರ ನದಿಯ ನೀರು ಭಕ್ತರ ಅನುಕೂಲತೆಗೆ ನಿರ್ಮಿತವಾದ ಲಗೇಜ್ ಕೊಠಡಿ ಇರುವ ಕಟ್ಟಡದ ತನಕ ವ್ಯಾಪಿಸಿತ್ತು.
ಸ್ನಾನಘಟ್ಟದ ಸಮೀಪ ಇರುವ ಶ್ರೀ ದೇವರ ಜಳಕದ ಕಟ್ಟೆಯು ಭಾಗಶಃ ಮುಳುಗಡೆಗೊಂಡಿತ್ತು.ಅಲ್ಲದೆ ಇಲ್ಲಿ ಸಮೀಪದಲ್ಲಿ ನಿರ್ಮಿಸಿದ್ದ ಅಂಗಡಿಗಳು ಜಲಾವೃತಗೊಂಡಿದ್ದವು.ಅಲ್ಲದೆ ಭಕ್ತರ ಅನುಕೂಲತೆಗಾಗಿ ಇರಿಸಿದ್ದ ಸಿಮೆಂಟ್‌ನ ಡ್ರೆಸ್ಸಿಂಗ್ ಕೊಠಡಿಗಳು ಕೂಡಾ ಮುಳುಗಡೆಯಾಗಿತು.
ಕುಮಾರಧಾರ ನದಿಯಲ್ಲಿ ಪ್ರವಾಹದ ಕಾರಣದಿಂದ ಸುಬ್ರಹ್ಮಣ್ಯ ಪೋಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದು,ಗೃಹರಕ್ಷಕ ದಳ ಮತ್ತು ಕುಕ್ಕೆ ದೇವಳದ ಭದ್ರತಾ ಸಿಬ್ಬಂಧಿಗಳು ದಿನದ ೨೪ ಗಂಟೆಗಳ ರಕ್ಷಣಾ ಕಾರ್ಯಕ್ಕೆ ಸನ್ನದ್ಧರಾಗಿದ್ದಾರೆ.ಎನ್‌ಡಿಆರ್‌ಎಫ್ ಪಡೆ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದು ರಕ್ಷಣೆಗೆ ಸನ್ನದ್ಧವಾಗಿದೆ.ಅಲ್ಲದೆ ನದಿ ತಟದಲ್ಲಿ ದೋಣಿಯ ವ್ಯವಸ್ಥೆ ಕೂಡಾ ಮಾಡಲಾಗಿದೆ.
ಸುಬ್ರಹ್ಮಣ್ಯ ಸ್ನಾನಘಟ್ಟದಲ್ಲಿ ಕುಮಾರಧಾರ ನದಿಯು ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಕಾರಣ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ಭಕ್ತಾದಿಗಳು ಹಾಗೂ ಪ್ರವಾಸಿಗಳು ಸ್ನಾನಘಟ್ಟದ ಬಳಿ ತೆರಳಬಾರದು.ಅಲ್ಲದೆ ಮುಂಜಾಗೃತಾ ದೃಷ್ಟಿಯಿಂದ ಸ್ನಾನಘಟ್ಟದ ಬಳಿ ತೆರಳದಂತೆ ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ಕಡಬ ತಹಶೀಲ್ದಾರ್ ಆದೇಶಿಸಿದ್ದಾರೆ.
ಆದ್ರೆ ಕುಕ್ಕೆ ಕ್ಷೇತ್ರ ದರುಶನಕ್ಕೆ ಯಾವುದೇ ತೊಂದರೆ ಇಲ್ಲ.ಸುಬ್ರಹ್ಮಣ್ಯ-ಧರ್ಮಸ್ಥಳ, ಸುಬ್ರಹ್ಮಣ್ಯ-ಉಪ್ಪಿನಂಗಡಿ-ಮಂಗಳೂರು, ಸುಬ್ರಹ್ಮಣ್ಯ-ಸುಳ್ಯ ರಸ್ತೆಗಳಲ್ಲಿ ಸಂಚರಿಸಿ ಕ್ಷೇತ್ರಕ್ಕೆ ಆಗಮಿಸಿ ತೆರಳಲು ಯಾವುದೇ ಸಮಸ್ಯೆ ಇಲ್ಲ.ಆದರೆ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ಮಾತ್ರ ಜಲಾವೃತಗೊಂಡಿದ್ದು ರಸ್ತೆ ಸಂಚಾರಕ್ಕೆ ತಡೆ ನಿರ್ಮಿಸಲಾಗಿದೆ.ಇದರಿಂದ ಧರ್ಮಸ್ಥಳ, ಬೆಂಗಳೂರು, ಮೈಸೂರು, ಮಂಗಳೂರಿನಿಂದ ಬರುವ ಭಕ್ತರಿಗೆ ಬೇರೆಯೇ ರಸ್ತೆ ಇರುವುದರಿಂದ ಯಾವುದೇ ಸಮಸ್ಯೆ ಇಲ್ಲ.