ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ಕುಮಾರಸ್ವಾಮಿ ಒಬ್ಬ ಹುಚ್ಚ. ಅವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಡಾ ಹಗರಣ ಹೊರಬರುವಲ್ಲಿ ಡಿಸಿಎಂ ಶಿವಕುಮಾರ್ ಕೈವಾಡವಿದೆ ಎಂಬ ಎಚ್ಡಿಕೆ ಆರೋಪದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಮಾಡುತ್ತಿರುವುದು ಆಧಾರರಹಿತ ಆರೋಪ. ಹುಚ್ಚು ಹಿಡಿದಿರುವ ಕಾರಣ ಅವರು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೆಲವೊಬ್ಬರಿಗೆ ನನ್ನನ್ನು ನೆನಪಿಸಿಕೊಳ್ಳದಿದ್ದರೆ ನಿದ್ದೆಯೂ ಬರುವುದಿಲ್ಲ, ತಲೆಯೂ ಓಡುವುದಿಲ್ಲ. ಅವರು ಬಾಯಿಗೆ ಬಂದಂತೆ ಮಾತಾಡುತ್ತಿರುವುದು ಬಹಳ ಸಂತೋಷದ ವಿಚಾರ ಎಂದು ತಿರುಗೇಟು ನೀಡಿದರು.
ಮಂಡ್ಯದಲ್ಲಿ ತಾವು ಮಾಡುತ್ತಿರುವ ಜನತಾ ದರ್ಶನಕ್ಕೆ ಅಧಿಕಾರಿಗಳು ಹೋಗಬಾರದೆಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಜನರನ್ನು ಇಟ್ಟುಕೊಂಡು ಜನತಾ ದರ್ಶನ ಮಾಡಲಿ. ಹಳ್ಳಿ, ಹಳ್ಳಿ ತಿರುಗಲಿ, ಯಾರು ಬೇಡ ಎಂದು ಹೇಳಿದ್ದಾರೆ. ಅಧಿಕಾರಿಗಳು ಶಿಷ್ಟಾಚಾರ ಪಾಲಿಸುತ್ತಾರೆ. ಅದರ ಪ್ರಕಾರ ಸಂಸದರನ್ನು ಹೇಗೆ ಸ್ವಾಗತಿಸಬೇಕೋ ಆ ರೀತಿ ಕೆಲಸ ಮಾಡುತ್ತಾರೆ. ನಾವು ದೆಹಲಿಗೆ ತೆರಳಿ ಅಲ್ಲಿನ ಅಧಿಕಾರಿಗಳನ್ನು ಬಳಸಿಕೊಳ್ಳಲು ಆಗುತ್ತದೆಯೇ? ಜನಕ್ಕೆ ಹೋಗಬೇಡಿ ಎಂದು ಹೇಳಲು ಆಗುತ್ತದೆಯೇ? ನನಗೆ ಈ ಆರೋಪದ ವಿಚಾರ ಗೊತ್ತೇ ಇಲ್ಲ. ನನಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವೂ ಇಲ್ಲ ಎಂದರು.