ಹೊಸದಿಗಂತ ವರದಿ, ಬೆಂಗಳೂರು:
ಹಲಸೂರುಗೇಟ್ ಠಾಣೆ ವ್ಯಾಪ್ತಿಯ ಕುಂಬಾರಪೇಟೆ ಮುಖ್ಯರಸ್ತೆಯಲ್ಲಿ ನಡೆದಿರುವ ಸುರೇಶ್(55) ಮತ್ತು ಮಹೇಂದ್ರ(68) ಅವರ ಜೋಡಿ ಕೊಲೆಗೆ ಸಂಬಂಧಿಸಿದಂತೆ ಆಸ್ತಿ ವಿಚಾರವಾಗಿ ಹಲವು ವರ್ಷಗಳಿಂದ ನಡೆಯುತ್ತಿರುವ ಜಗಳವೇ ಕೊಲೆಗೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಫೆ.7 ರಂದು ರಾತ್ರಿ 8.30 ರ ಸುಮಾರಿಗೆ ಚಾಕುವಿನಿಂದ ಮನಸೋಇಚ್ಛೆ ಹತ್ಯೆ ಮಾಡಿರುವ ಆರೋಪಿ ಭದ್ರಿ, ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಕೇಂದ್ರ ವಿಭಾಗದ ಡಿಸಿಪಿ ಎಚ್.ಕೆ ಶೇಖರ್ ಖುದ್ದು ಸ್ಥಳಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಕುಂಬಾರಪೇಟೆ ಅನ್ನದಾತ ಸಮಿತಿ ಟ್ರಸ್ಟ್ ಮತ್ತು ಕುಂಬಾರಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದ ಕಟ್ಟಡ ಸಮಿತಿ ಟ್ರಸ್ಟ್ ಒಡೆತನದಲ್ಲಿ ಸುಮಾರು 8 ಕೋಟಿ ರೂ. ಬೆಲೆಬಾಳುವ ವಾಣಿಜ್ಯ ಸಂಕೀರ್ಣ ಇದೆ. ಇದಕ್ಕೆ ಪ್ರತಿ ತಿಂಗಳಿಗೆ ಸುಮಾರು 10 ಲಕ್ಷ ರೂ ಬಾಡಿಗೆ ಬರುತ್ತದೆ. ಇದೇ ಆಸ್ತಿ ವಿಚಾರಕ್ಕೆ ಯಾವಾಗಲೂ ಜಗಳ ಆಗುತ್ತಿತ್ತು ಎನ್ನಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಟ್ರಸ್ಟ್ ಪದಾಧಿ ಕಾರಿಗಳು, ಪ್ರತ್ಯಕ್ಷದರ್ಶಿಗಳು ಸೇರಿದಂತೆ ಹಲವರ ಹೇಳಿಕೆಗಳನ್ನು ಪರಿಶೀಲಿಸಿ ದಾಖಲೆಗಳನ್ನು ಸಂಗ್ರಹಿಸಿ ದೋಷಾರೋಪಣ ಪಟ್ಟಿ ಸಿದ್ದಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪದ್ಮನಾಭನಗರದ ನಿವಾಸಿ ಸುರೇಶ್, ಕುಂಬಾರಪೇಟೆ ಅನ್ನದಾತ ಸಮಿತಿ ಟ್ರಸ್ಟ್ ಪದಾಧಿಕಾರಿಯಾಗಿದ್ದರು. ಅವರ ತಂದೆ, ಈ ಹಿಂದೆ ಟ್ರಸ್ಟ್ ಅಧ್ಯಕ್ಷರಾಗಿದ್ದರು. ಇದರೊಂದಿಗೆ ವಾಣಿಜ್ಯ ಸಂಕೀರ್ಣದಲ್ಲಿರುವ ಮಳಿಗೆಯೊಂದನ್ನು ಸುರೇಶ್ ತಮ್ಮ ಹೆಸರಿಗೆ ಪಡೆದುಕೊಂಡಿದ್ದರು. ಟ್ರಸ್ಟ್ ಸಂಸ್ಥಾಪಕರ ಕುಟುಂಬದ ಸದಸ್ಯನಾಗಿದ್ದ ಆರೋಪಿ ಭದ್ರಿ, ಟ್ರಸ್ಟ್ ಆಸ್ತಿ ಹಾಗೂ ಕೌಟುಂಬಿಕ ಕಾರಣಕ್ಕೆ ಸುರೇಶ್ ಮೇಲೆ ಮೈಮನಸ್ಸು ಹೊಂದಿದ್ದನು. ತನ್ನ ಹಿರಿಯರು ಪ್ರಾರಂಭಿಸಿರುವ ಟ್ರಸ್ಟ್, ಲಾಭವನ್ನು ಸುರೇಶ್ ಮತ್ತು ಆತನ ಮನೆಯವರು ಪಡೆಯುತ್ತಿದ್ದರಿಂದ ಕೋಪಗೊಂಡು ಭದ್ರಿ, ಮಳಿಗೆಗೆ ನುಗ್ಗಿ ಸುರೇಶ್ ನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಸ್ನೇಹಿತ ಸುರೇಶ್ ಅವರನ್ನು ಕಾಪಾಡಲು ಅಡ್ಡಲಾಗಿ ಬಂದಿದ್ದ ಮಹೇಂದ್ರ ಅವರನ್ನೂ ಆರೋಪಿ ಹತ್ಯೆ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಜೀವ ಕೊಟ್ಟ ಸ್ನೇಹ:
ಕುಂಬಾರಪೇಟೆಯ ಶ್ರೀ ಹರಿ ಮಾರ್ಕೆಟಿಂಗ್ ಕಚೇರಿಯಲ್ಲಿ ರಾತ್ರಿ ವೇಳೆ ಸ್ನೇಹಿತ ಮಹೇಂದ್ರ ಜತೆ ಸುರೇಶ್ ಮಾತನಾಡುತ್ತಾ ಕುಳಿತಿದ್ದ ಈ ವೇಳೆ ಏಕಾಏಕಿ ನುಗ್ಗಿದ್ದ ಭದ್ರಿ, ಚಾಕು ತೆಗೆದು ಸುರೇಶ್ ಎದೆ ಭಾಗಕ್ಕೆ ಚುಚ್ಚಿ ಕೊಲೆಗೆ ಮುಂದಾಗಿದ್ದಾನೆ. ಈ ವೇಳೆ ತನ್ನ ಸ್ನೇಹಿತನ ಪ್ರಾಣ ಉಳಿಸೋಕೆ ಮಹೇಂದ್ರ ಮುಂದಾಗಿದ್ದ ಈ ವೇಳೆ ಆರೋಪಿ ಭದ್ರ ಮಹೇಂದ್ರನ ಎದೆಗೂ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇನ್ನು ಜೋಡಿ ಹತ್ಯೆ ಮಾಡಿದ ಬಳಿಕ ಭದ್ರಿ ನೇರವಾಗಿ ಹಲಸೂರ್ ಗೇಟ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಭದ್ರಿಯಿಂದ ದೂರವಾಗಿದ್ದ ಪತ್ನಿ:
ಆರೋಪಿ ಭದ್ರಿಯಿಂದ ಈತನ ಪತ್ನಿಯು ಬಹು ಹಿಂದೆಯೇ ದೂರವಾಗಿದ್ದಳು. ಸುರೇಶ್ ಭದ್ರಿಯ ಪತ್ನಿಗೆ ಹೇಳಿ ದೂರ ಮಾಡಿಸಿದ್ದರು. ಮಳಿಗೆಯೊಂದನ್ನು ಬಾಡಿಗೆ ನೀಡಿದ್ದರಿಂದ ಬಂದಿದ್ದ ಹಣವನ್ನು ಭದ್ರಿಯ ಪತ್ನಿಗೂ ಕೊಟ್ಟಿದ್ದು, ಆಕೆ ಬೇರೆ ವಾಸಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಟ್ಟಿದ್ದ ಪೊಲೀಸರು ತಿಳಿಸಿದ್ದಾರೆ.