ಯಕ್ಷಗಾನ ಕ್ಷೇತ್ರದ ಅದ್ಭುತ ಪ್ರತಿಭೆ ಕುಂಬ್ಳೆ ಶ್ರೀಧರ ರಾವ್ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಕ್ಷಗಾನ ಕಲಾ ಕ್ಷೇತ್ರದ ದಿಗ್ಗಜ, ಶ್ರೀ ಧರ್ಮಸ್ಥಳ ಮೇಳದಲ್ಲಿ ಸುಧೀರ್ಘ ಕಾಲ ತಿರುಗಾಟ ಮಾಡಿದ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಯಕ್ಷಗಾನ ಕಲಾ‌ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿದ್ದ ಕಲಾವಿದರ ಪೈಕಿ ಒಬ್ಬರಾಗಿದ್ದ ಶ್ರೀಧರ ರಾವ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.

ಶ್ರೇಷ್ಠ ಕಲಾವಿದರ ಒಡನಾಟದಲ್ಲಿ ಬೆಳೆದ ಕುಂಬಳೆ ಶ್ರೀಧರ ರಾಯರು ಸ್ತ್ರೀ ಪಾತ್ರಗಳಾದ ದಮಯಂತಿ, ದಾಕ್ಷಾಯಿಣಿ, ಅಮ್ಮು ಬಲ್ಲಾಳ್ತಿ, ಲಕ್ಷ್ಮಿ, ಸುಭದ್ರೆ, ಸತ್ಯಭಾಮೆ ಅಲ್ಲದೆ ಪ್ರಮೀಳೆ, ಶಶಿಪ್ರಭೆ, ವಜ್ರಲೇಖೆ ಮೊದಲಾದ ಸ್ತ್ರೀವೇಷಗಳನ್ನು ಮಾಡಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದವರು. ನಂತರದ ದಿನಗಳಲ್ಲಿ ಕುಂಬಳೆ ಶ್ರೀಧರ ರಾಯರು ಅದೇ ರಂಗಸ್ಥಳದಲ್ಲಿ ಪುರುಷ ಪಾತ್ರಗಳಲ್ಲಿ ಜೀವತುಂಬಿ ಮಿಂಚುದವರು. ವಯಸ್ಸು ಮತ್ತು ದೇಹದ ಭಾಷೆ ತೊಡಕಾಗುವ ಮೊದಲೇ ಸ್ತ್ರೀ ಪಾತ್ರಗಳ ನಿರ್ವಹಣೆಯನ್ನು ಬಿಟ್ಟು ಪುರುಷ ಪಾತ್ರಗಳನ್ನು ಆಯ್ಕೆ ಮಾಡಿಕೊಂಡ ಚತುರಮತಿ ಇವರು.

ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ನಾಯ್ಕಾಪು ಕುಂಬಳೆ ಶ್ರೀಧರ ರಾಯರ ಹುಟ್ಟೂರು. ೧೯೪೮ನೇ ಇಸವಿ ಜುಲೈ ೨೩ರಂದು ಮಾಲಿಂಗ ಮುಕಾರಿ ಮತ್ತು ಕಾವೇರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನನ. ಸೂರಂಬೈಲು ಸರಕಾರೀ ಶಾಲೆಯಲ್ಲಿ ೪ನೇ ತರಗತಿಯ ವರೇಗೆ ವಿದ್ಯಾಭ್ಯಾಸ. ಎಳವೆಯಲ್ಲಿ ಬಡತನದ ಬೇಗೆ. ಹೊಟ್ಟೆಗೆ ಬಟ್ಟೆಗೆ ಇಲ್ಲದೆ ಕಷ್ಟವನ್ನನುಭವಿಸಿದ ದಿನಗಳು. ಶಾಲೆ ಅನಿವಾರ್ಯವಾಗಿ ಬಿಡಬೇಕಾಯಿತು. ನಂತರ ಯಕ್ಷಗಾನ ಆಡಂಬೋಲವೇ ಪಾಠಶಾಲೆಯಾಯಿತು.

ಮುಲ್ಕಿ ಮೇಳ, ಕೂಡ್ಲು ಮೇಳ, ಕರ್ನಾಟಕ ಮೇಳದಲ್ಲಿ ಎರಡು ವರ್ಷ ತಿರುಗಾಟ ನಡೆಸಿದರು. ೪೪ ವರುಷಗಳಿಂದ ಧರ್ಮಸ್ಥಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಕಲಾಸೇವೆಯನ್ನು ಮಾಡಿ ನಿವೃತ್ತರಾದರು. ಹೀಗೆ ಕಲಾವಿದನಾಗಿ ಕುಂಬಳೆ ಶ್ರೀಧರ ರಾಯರದ್ದು ೫೭ ವರುಷಗಳಿಗೂ ಮಿಕ್ಕಿ ವಿವಿಧ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!