– ಗಣೇಶ ಜೋಶಿ ಸಂಕೊಳ್ಳಿ
ಹತ್ತು ಹಲವು ದೈವಿಕ ಸ್ಥಾನಗಳನ್ನು ತನ್ನೊಡಲಲ್ಲಿ ಹೊಂದಿದ ಪ್ರಕೃತಿ ಸೌಂದರ್ಯವುಳ್ಳ ಕುಮಟಾ ತಾಲೂಕಿನಲ್ಲಿ ಪ್ರಸಿದ್ಧ ನಾಗ ಕ್ಷೇತ್ರವೊಂದಿದೆ. ನಾಗ ದೋಷ ಉಂಟಾದವರ ಪಾಲಿನ ಮಹಾ ರಕ್ಷಕ ಕ್ಷೇತ್ರ ಇದು. ಸಂತಾನ ಸಂಬಂಧಿಸಿ ದೇವರನ್ನೇ ನಂಬಿ ಬರುವ ಭಕ್ತರ ಸಂತಾನ ಸಂಬಂಧ ಯಾವುದೇ ಪ್ರತಿಬಂಧಕಗಳು ಇದ್ದರೂ ಅದೆಲ್ಲವೂ ನಿವಾರಣೆಯಾಗಿ, ಸುಫಲ ಸಂತಾನ ಅನುಗ್ರಹಿಸುವ ಈ ನಾಗದೇವರಿರುವ ಶಕ್ತಿ ಸ್ಥಾನವೇ ನಾಗತೀರ್ಥ.
ಕುಮಟಾ ಹೊನ್ನಾವರ ರಾಷ್ಟೀಯ ಹೆದ್ದಾರಿಯ ಮಾರ್ಗವಾಗಿ ಹೊರಟರೆ, ಕುಮಟಾದಿಂದ ಸುಮಾರು 7.5 ಕಿ.ಮೀ ಕ್ರಮಿಸಿದರೆ ಧಾರೇಶ್ವರ ದೇವಾಲಯಕ್ಕೂ ಹಿಂದೆ ಈ ಕ್ಷೇತ್ರ ಕಾಣಸಿಗುತ್ತದೆ. ರಾಷ್ಟ್ರೀಯ ಹೆದ್ದಾರಿಯಿಂದ ಅನತಿ ದೂರದಲ್ಲಿ ಪ್ರಾಕೃತಿಕವಾಗಿ ಇರುವ ಕಡಿದಾದ ದಾರಿಯಲ್ಲಿ ಸಾಗಿದರೆ ಈ ದೇವಾಲಯ ತಲುಪಬಹುದು.
ದುರ್ಮುಖ ಎಂದು ಕರೆಯಲ್ಪಡುವ ಗುಹಾಂತರ ನಾಗದೇವರು ಇಲ್ಲಿಯ ವಿಶೇಷ. ಗುಹೆಯೊಳಗೆ ಇರುವ ನಾಗ ದೇವರು ಸದಾ ಸಣ್ಣದೊಂದು ಝರಿಯ ನಡುವಿನಲ್ಲಿ ಆವೀರ್ಭವಿಸಿದ್ದಾನೆ. ಈ ಝರಿಯ ನೀರನ್ನೇ ನಾಗರ ಅಭಿಷೇಕಕ್ಕೆ ಬಳಸಲಾಗುವುದು. ಅದಷ್ಟೇ ಅಲ್ಲದೇ ಧಾರೇಶ್ವರದ ಧಾರಾನಾಥನಿಗೂ ವಿಶೇಷ ದಿನದಂದು ಹಾಗೂ ರಥೋತ್ಸವದಂದು ಇಲ್ಲಿಯ ತೀರ್ಥದಿಂದ ಅಭಿಷೇಕ ಮಾಡಲಾಗುತ್ತದೆ.
ದೇವಾಲಯದ ಸುಂದರ ಪ್ರಕೃತಿಯ ಹೊರ ಆವಾರದಲ್ಲಿ ಬೃಹದಾಕಾರದ ತೀರ್ಥದ ಕೆರೆಯೂ ಇದೆ. ನಾಗದೋಷ ಪರಿಹಾರಕ್ಕೆ ಸಹಸ್ರಾರು ಭಕ್ತರು ನಾಗತೀರ್ಥ ಸ್ನಾನ ಮಾಡುವುದುಂಟು. ಇಲ್ಲಿಗೆ ಬಂದು ತೀರ್ಥ ಪಡೆದವರು, ತೀರ್ಥ ಸ್ನಾನ ಮಾಡಿದವರು ನಾಗದೋಷದಿಂದ ಮುಕ್ತರಾಗುತ್ತಾರೆ ಎಂಬುದು ನಂಬಿಕೆ.
ಈ ಕ್ಷೇತ್ರ ಕೇವಲ ಸಾಮಾನ್ಯ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ, ಭಗವಾನ್ ಶ್ರೀಹರಿಯೇ ಈ ದಿವ್ಯ ಕ್ಷೇತ್ರದಲ್ಲಿ ತಪಸ್ಸು ಮಾಡಿದ್ದರೆಂಬ ಹಾಗೂ ಅಗಸ್ತ್ಯ ಮುನಿ ಇಲ್ಲಿದ್ದುಕೊಂಡು ನಾಗ ಆರಾಧನೆ ಮಾಡಿದ್ದರು ಎಂಬುದು ಇಲ್ಲಿಯ ಐತಿಹ್ಯ. ದಿನದಿಂದ ದಿನಕ್ಕೆ ಈ ಕ್ಷೇತ್ರದ ಮಹಿಮೆ ಗೊತ್ತಾಗಿ ಅಪಾರ ಭಕ್ತರು ಇಲ್ಲಿಗೆ ಧಾವಿಸಿ ಬರುತ್ತಿದ್ದಾರೆ.