ಹೊಸದಿಗಂತ ಡಿಜಿಟಲ್ ಡೆಸ್ಕ್:
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಆಶ್ರಯದಲ್ಲಿ ಶೇಣಿ ಜಂಗಮ ಟ್ರಸ್ಟ್ (ರಿ.) ಕಾಸರಗೋಡು, ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಉಜಿರೆ ಇವರಿಂದ ರಜತ ಪರ್ವ ಸರಣಿ ಡಾ. ಶೇಣಿ ಗೋಪಾಲಕೃಷ್ಣ ಭಟ್ ಸಂಸ್ಮೃತಿ ಯಕ್ಷಗಾನ ತಾಳಮದ್ದಳೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಭಾನುವಾರ ಸಮಾರೋಪಗೊಂಡಿತು. ಎರಡೂ ದಿನಗಳ ಯಕ್ಷಗಾನ ತಾಳಮದ್ದಳೆಯು ಯಕ್ಷಗಾನಾಸಕ್ತರನ್ನು ಪುನರಪಿ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು. ಹರಿದರ್ಶನ ಪ್ರಸಂಗದಲ್ಲಿ ಹಿರಿಯ ಅನುಭವಿ ಕಲಾವಿದ ಉಜಿರೆ ಅಶೋಕ ಭಟ್ ಸುದನ್ವ, ಪ್ರಸಿದ್ಧ ವಿದ್ವಾಂಸ ಸರ್ಪಂಗಳ ಈಶ್ವರ ಭಟ್ ಅರ್ಜುನನಾಗಿ, ಶೇಣಿ ವೇಣುಗೋಪಾಲ ಭಟ್ ಕೃಷ್ಣನಾಗಿ ಪಾತ್ರಕ್ಕೆ ಜೀವತುಂಬಿದರು. ಆಕಾಶವಾಣಿ ಕಲಾವಿದ ಸಂಪಾಜೆ ಸುಬ್ರಾಯ, ಉದಯ ಕಂಬಾರು, ಅಂಬೆಮೂಲೆ ಶಿವಶಂಕರ ಭಟ್ ಹಿಮ್ಮೇಳದಲ್ಲಿ ಸಹಕರಿಸಿದರು. ಆದಿತ್ಯವಾರ ಸಂಜೆ ಜರಗಿದ ಗುರುದಕ್ಷಿಣೆ ಕಥಾಭಾಗದಲ್ಲಿ ಹಿಮ್ಮೇಳದಲ್ಲಿ ರಮೇಶ ಭಟ್ ಪುತ್ತೂರು, ಲಕ್ಷ್ಮೀಶ ಬೇಂಗ್ರೋಡಿ, ಶ್ರೀಶನಾರಾಯಣ ಕೋಳಾರಿ, ಮುಮ್ಮೇಳದಲ್ಲಿ ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್, ಶೇಣಿ ವೇಣುಗೋಪಾಲ ಭಟ್ ಪಾಲ್ಗೊಂಡು ಮಾತಿನ ಮೋಡಿಯ ಮೂಲಕ ಪ್ರೇಕ್ಷಕರ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡರು.