ಹೊಸದಿಗಂತ ವರದಿ ಆಲೂರು:
ಕೈಗಾರಿಕೆಗಳು, ಉದ್ದಿಮೆಗಳು ಸಂಕಷ್ಟಕ್ಕೆ ಸಿಲುಕಿ ನಷ್ಟವಾದರೆ ಸರ್ಕಾರ ಸಾಲ ಮನ್ನಾ ಮಾಡುವ ರೀತಿಯಲ್ಲಿ, ಬರದ ದವಡೆಗೆ ಸಿಲುಕಿರುವ ರೈತರ ಸಾಲ ಮನ್ನಾ ಮಾಡಬೇಕೆಂದು, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದ ಬಸ್ ನಿಲ್ದಾಣದ ಬಳಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ರೈತ ಸಮಾವೇಶ ಉದ್ದೇಶಿಸಿ ಮಾತನಾಡಿ, ರೈತ ಎಂದಿಗೂ ಸ್ವಾರ್ಥಕ್ಕಾಗಿ ಸಾಲ ಮಾಡುವುದಿಲ್ಲ. ದೇಶದ ಜನರಿಗಾಗಿ ಆಹಾರ ಉತ್ಪಾದನೆ ಮಾಡಲು ಸಾಲ ಮಾಡುತ್ತಾನೆ. ಕೃಷಿ ಭೂಮಿಯಲ್ಲಿ ಬಂಡವಾಳ ಹಾಕುತ್ತಾನೆ.ಆದರೆ ಹವಾಮಾನ ವೈಪರೀತ್ಯದಿಂದ ಮಳೆ ಬಾರದೆ ಅಥವಾ ಅತಿಯಾದ ಮಳೆಯಾದರೆ ಬೆಳೆ ನಾಶವಾಗುತ್ತದೆ. ಬೆಳೆ ಚೆನ್ನಾಗಿ ಬಂದರು ಬೆಲೆ ಕುಂಟಿತವಾಗುತ್ತದೆ, ರೈತನ ಬಂಡವಾಳ ನಾಶವಾಗುತ್ತದೆ, ಇದೇ ರೀತಿ ಎರಡು ಮೂರು ವರ್ಷ ಮುಂದುವರೆದರೆ ರೈತ ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾನೆ.
ಕೈಗಾರಿಕೆಗಳು, ಉದ್ದಿಮೆಗಳು, ಸಂಕಷ್ಟಕ್ಕೆ ಸಿಲುಕಿ ನಷ್ಟವಾದರೆ ಸಾಲ ಮತ್ತು ಬಡ್ಡೊ ಮನ್ನಾ ಮಾಡಿ ಹೊಸ ಸಾಲ ಕೊಡುತ್ತಾರೆ. ರೈತರಿಗೆ ಇಂತಹ ಅವಕಾಶಗಳನ್ನು ಏಕೆ ಕೊಡಬಾರದು. ಈ ದೇಶದ ಸರ್ಕಾರಗಳ ಇಂತಹ ಅನೀತಿಗಳ ವಿರುದ್ಧ ರೈತರು ತೊಡೆ ತಟ್ಟಿ ಹೋರಾಡಲೇಬೇಕು. ಅದಕ್ಕಾಗಿ ರೈತರು ಜಾತಿ, ಪಕ್ಷ ಬಿಟ್ಟು ಸಂಘಟಿತರಾಗಿ ಹೋರಾಟ ಮಾಡಬೇಕು.
ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲ ಬಂದಿದೆ. ಸಂಕಷ್ಟದ ರೈತರ ಬಗ್ಗೆ ಯಾವ ಪಕ್ಷದವರು ಮಾತನಾಡುತ್ತಿಲ್ಲ ಆಳುವ ಸರ್ಕಾರಗಳು ರೈತರ ಮೂಗಿಗೆ ತುಪ್ಪ ಸವರುವ ಹೇಳಿಕೆಗಳನ್ನು ಕೊಡುತ್ತಾ ಇಬ್ಬಂದಿ ನೀತಿಯನ್ನು ಅನುಸರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕೂಟದ ತಾ. ಅಧ್ಯಕ್ಷ ಎಚ್. ಬಿ. ಧರ್ಮರಾಜ್ ಮಾತನಾಡಿ, ರಾಜ್ಯ ಸರ್ಕಾರ ಬರಗಾಲವೆಂಬ ಕಾರಣ ವಿದ್ಯುತ್ ಉತ್ಪಾದನೆ ಕುಂಠಿತ ಎಂದು ರೈತರಿಗೆ ಹೇಳಿ ಕೇವಲ ೫ಗಂಟೆ ವಿದ್ಯುತ್ ಕೊಡುತ್ತದೆ. ಪ್ರಜಾಪ್ರಭುತ್ವ ರೌಡಿಗಳ ರಾಜ್ಯವಾಗಿದೆ. ಜನರು ಎಚ್ಚೆತ್ತು ಸಂಘಟಿತ ಹೋರಾಟ ಮಾಡಬೇಕು. ಜಿಲ್ಲೆಯ ಆಲೂರು, ಸಕಲೇಶಪುರ, ಬೇಲೂರು ತಾಲ್ಲೂಕಿನಲ್ಲಿ ಕಾಡಾನೆ ಹಾವಳಿಯಿಂದ ರೈತ ತತ್ತರಿಸಿದ್ದಾನೆ. ಮಳೆ ಇಲ್ಲದೆ ಬಿತ್ತಿದ ಬೆಳೆ ನಾಶವಾಗಿದೆ. ಕೃಷಿಗಾಗಿ ಬ್ಯಾಂಕಿನಲ್ಲಿ ಸಾಲ ಮಾಡಿ ವಾಪಾಸು ಕಟ್ಟಲು ಹಣವಿಲ್ಲದೆ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾನೆ. ಅಲ್ಪಸ್ವಲ್ಪ ಇದ್ದ ಬೆಳೆಗೆ ನೀರು ಹಾಯಿಸಲು ಸೂಕ್ತ ಸಮಯದಲ್ಲಿ ಸಾಕಷ್ಟು ವಿದ್ಯುತ್ ಕೊಡುತ್ತಿಲ್ಲ. ರೈತರ ಉಳಿವಿಗಾಗಿ ಒಕ್ಕೂಟ ಸರ್ಕಾರದ ಅನೀತಿಗಳ ವಿರುದ್ಧ ಹೋರಾಡುತ್ತದೆ ಎಂದರು.
ಸಮಾವೇಶದಲ್ಲಿ ರೈತಮುಖಂಡ ಮಲ್ಲೇಶಚಾರ್ ಮಾತನಾಡಿದರು. ಸಮಾರಂಭದಲ್ಲಿ ರೈತ ಮಹಿಳಾ ಸಂಘಟನೆ ಮುಖ್ಯಸ್ಥೆ ಲತಾಯೋಗಣ್ಣ, ತೀರ್ಥಕುಮಾರ್, ಭರಣ್ ಭಾಗವಹಿಸಿದ್ದರು.