ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಕ್ರವಾರ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕುವೈತ್‌ನಲ್ಲಿ ಅಗ್ನಿ ದುರಂತದಲ್ಲಿ ಮೃತಪಟ್ಟವರ ಪಾರ್ಥಿವ ಶರೀರಗಳಿಗೆ ಪುಷ್ಪ ನಮನ ಸಲ್ಲಿಸಿದರು.
ಬೆಂಕಿ ಅವಘಡದಲ್ಲಿ ಕನಿಷ್ಠ 45 ಭಾರತೀಯರು ಸಾವನ್ನಪ್ಪಿದ್ದು, ಕೇರಳ (23), ತಮಿಳುನಾಡು (7), ಮತ್ತು ಕರ್ನಾಟಕ (1) ಸಂತ್ರಸ್ತರ 31 ಶವಗಳನ್ನು ಭಾರತೀಯ ವಾಯುಪಡೆಯ ವಿಶೇಷ ವಿಮಾನದ ಮೂಲಕ ಶುಕ್ರವಾರ ಕೇರಳದ ಕೊಚ್ಚಿಗೆ ತರಲಾಯಿತು.
ಶುಕ್ರವಾರ ಬೆಳಗ್ಗೆ 10.30ರ ಸುಮಾರಿಗೆ ಐಎಎಫ್‌ನ ವಿಶೇಷ ವಿಮಾನ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, ರಾಜ್ಯ ಸಚಿವರಾದ ವೀಣಾ ಜಾರ್ಜ್, ಪಿ ರಾಜೀವ್, ಕೆ ರಾಜನ್ ಮತ್ತು ರೋಷಿ ಆಗಸ್ಟಿನ್, ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಮತ್ತು ಕೇಂದ್ರ ಸಚಿವ ಸುರೇಶ್ ಗೋಪಿ ಕೂಡ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್‌ನ ಹೊರಗೆ ಜೋಡಿಸಲಾದ ಟೇಬಲ್‌ಗಳಲ್ಲಿ ಶವಗಳನ್ನು ಇರಿಸಲಾಗಿತ್ತು. ಕಾಂಗ್ರೆಸ್ ಸಂಸದ ಹೈಬಿ ಈಡನ್, ಕಾಂಗ್ರೆಸ್ ನಾಯಕ ಚಾಂಡಿ ಉಮೆನ್, ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಮತ್ತು ಮಾಜಿ ಕೇಂದ್ರ ಸಚಿವ ವಿ ಮುರಳೀಧರನ್ ಸೇರಿದಂತೆ ಇತರರು ಸಂತ್ರಸ್ತರಿಗೆ ಶ್ರದ್ಧಾಂಜಲಿ ಅರ್ಪಿಸಿದರು.