ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನ ಭದ್ರತೆಯ ಲೋಪ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಇದಾದ ಬಳಿಕ ಹಲವು ಸ್ಪೋಟಕ ಮಾಹಿತಿಗಳು ಹೊರಬರುತ್ತಿದೆ.
ಪೊಲೀಸರ ವಿಚಾರಣೆ ವೇಳೆ ದಿನಕ್ಕೊಂದು ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಬಂಧಿತ ಆರೋಪಿ ಸಾಗರ್ ಶರ್ಮಾ ತಾನು ಸಂಸತ್ತಿನ ಹೊರಗೆ ಬೆಂಕಿ ಹಚ್ಚಿಕೊಳ್ಳಲು ತೀರ್ಮಾನಿಸಿದ್ದೆ ಎಂದು ಹೇಳಿದ್ದಾರೆ.
ದೆಹಲಿ ಪೊಲೀಸರ ವಿಚಾರಣೆ ವೇಳೆ ಸಾಗರ್ ತನ್ನನ್ನು ತಾನು ಸುಟ್ಟುಕೊಳ್ಳಲು ಬಯಸಿದ್ದೆ, ಆದರೆ ನಂತರ ಈ ಯೋಜನೆಯನ್ನು ಕೈಬಿಡಲಾಗಿತ್ತು ಎಂದು ಹೇಳಿದ್ದಾನೆ.
ಜೆಲ್ ಒಂದನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಲು ಬಯಸಿದ್ದೆ ಈ ಜೆಲ್ ಅನ್ನು ದೇಹದ ಮೇಲೆ ಹಚ್ಚಿಕೊಳ್ಳುವ ಮೂಲಕ ಬೆಂಕಿಯಿಂದ ರಕ್ಷಣೆ ಪಡೆಯಬಹುದು, ಆದರೆ ಆನ್ಲೈನ್ ಹಣ ಪಾವತಿ ಸಾಧ್ಯವಾಗಿರಲಿಲ್ಲ, ಹೀಗಾಗಿ ಜೆಲ್ ಖರೀದಿಸಲಾಗಲಿಲ್ಲ, ನಂತರ ಸಂಸತ್ತಿನ ಹೊರಗೆ ಬೆಂಕಿ ಹಚ್ಚಿಕೊಳ್ಳುವ ಯೋಜನೆಯನ್ನು ಕೈಬಿಡಲಾಯಿತು ಎಂದಿದ್ದಾನೆ.
ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಇಬ್ಬರು ವ್ಯಕ್ತಿಗಳು ಸದನಕ್ಕೆ ನುಗ್ಗಿ ಹೊಗೆ ಬಾಂಬ್ ಹಾಕಿದ್ದರು. ಆರೋಪಿಗಳು ಘಟನೆ ನಡೆಸಲು ಒಂದಲ್ಲ ಎರಡಲ್ಲ 7 ಹೊಗೆ ಕ್ಯಾನ್ಗಳೊಂದಿಗೆ ಆಗಮಿಸಿದ್ದರು. ಆರೋಪಿಗಳು ಗೂಗಲ್ ನಲ್ಲಿ ಸರ್ಚ್ ಮಾಡಿ ಸಂಸತ್ ಭವನದ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರು. ಸಂಸತ್ ಭದ್ರತೆಯ ಹಳೆಯ ವೀಡಿಯೋಗಳನ್ನೂ ಒಳಗೊಂಡ ವಿಡಿಯೋದಿಂದ ಸುತ್ತಮುತ್ತಲಿನ ಪ್ರದೇಶಗಳ ಬಗ್ಗೆ ಸಾಕಷ್ಟು ವಿಷಯಗಳು ತಿಳಿದುಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಈ ಕಾರಣಕ್ಕಾಗಿಯೇ ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳೆಲ್ಲರೂ ಸಿಗ್ನಲ್ ಆ್ಯಪ್ನಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತಿದ್ದು, ಯಾರನ್ನೂ ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.