ನಿಮ್ಮ ಖಾತೆಗೆ ಲಕ್ಷ ರೂ. ಹಾಕ್ತೇವೆ ಎಂದರೂ ಜನರು ಕಾಂಗ್ರೆಸ್‌ಗೆ ವೋಟ್ ಹಾಕಿಲ್ಲ: ಮೋದಿ ವ್ಯಂಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಮಗೆ ಮತ ಹಾಕಿ ನಿಮ್ಮ ಖಾತೆಗೆ 1 ಲಕ್ಷ ರೂ. ಹಾಕ್ತೇವೆ ಎಂದು ಕಾಂಗ್ರೆಸ್‌ ಪಕ್ಷ ದೇಶಾದ್ಯಂತ ಭಾರಿ ಪ್ರಚಾರ ನಡೆಸಿತು.ಈ ಕುರಿತು ಕಾರ್ಡ್‌ಗಳನ್ನು ಮನೆಮನೆಗೆ ವಿತರಿಸಿತು. ಆದರೂ ಜನ ಆ ಪಕ್ಷವನ್ನು ಧಿಕ್ಕರಿಸಿದ್ದಾರೆ. ಇಂದು 1 ಲಕ್ಷ ಕೊಡಿ ಎಂದು ಕೆಲವೆಡೆ ಜನ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕುತ್ತಿದ್ದಾರೆ ಎಂದು ನರೇಂದ್ರ ಮೋದಿ ಅವರು ವ್ಯಂಗ್ಯವಾಡಿದರು.

ಹೊಸದಿಲ್ಲಿಯಲ್ಲಿ ಶುಕ್ರವಾರ ನಡೆದ ಎನ್‌ಡಿಎ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್‌ ಪಕ್ಷ ಅಧಿಕಾರ ಸಿಕ್ಕಾಗ ಜನಸೇವೆ ಮಾಡುವುದನ್ನು ಬಿಟ್ಟು , ಅಧಿಕಾರ ಕಳೆದುಕೊಂಡ ಮೇಲೆ ಜನರಿಗೆ ನಾನಾ ಕೊಡುಗೆಗಳ ಆಮಿಷ ಒಡ್ಡುತ್ತ ಮರುಳು ಮಾಡುವ ವ್ಯರ್ಥ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.
ದೇಶಾದ್ಯಂತ ಕಾಂಗ್ರೆಸ್‌ ಕಚೇರಿಗಳ ಎದುರು ಜನ ಗುಂಪುಗುಂಪಾಗಿ ಸೇರಿ, ನೀವು ಕೊಡುತ್ತೇವೆ ಎಂದಿದ್ದ 1 ಲಕ್ಷ ರೂ. ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ ನಾಯಕರು ಅವರನನ್ನು ಹೊಡೆದು ಬಡಿದು ಓಡಿಸುತ್ತಿದ್ದಾರೆ. ಇದು ಬಡವರಿಗೆ ಮಾಡುವ ಅವಮಾನ ಎಂದು ಮೋದಿ ಟೀಕಿಸಿದರು.

ಹತ್ತು ವರ್ಷಗಳ ಬಳಿಕವೂ ಕಾಂಗ್ರೆಸ್‌ಗೆ 100 ಸೀಟುಗಳನ್ನು ದಾಟಲೂ ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ನ ಭ್ರಷ್ಟಾಚಾರ ಮತ್ತು ಜನ ವಿರೋಧಿ ನೀತಿಯನ್ನು ಮತದಾರರು ಮರೆತಿಲ್ಲ. ಯುಪಿಎ ಹೆಸರನ್ನು ಇಂಡಿ ಒಕ್ಕೂಟ ಎಂದು ಬದಲಾಯಿಸಿಕೊಂಡರೂ ಜನ ಇವರ ಹಗರಣಗಳನ್ನು ಮರೆತಿಲ್ಲ. ಹಾಗಾಗಿ ಮೂರನೇ ಬಾರಿ ದೇಶದ ಜನ ಎನ್‌ಡಿಎ ಒಕ್ಕೂಟವನ್ನು ಬೆಂಬಲಿಸಿದ್ದಾರೆ ಎಂದು ಮೋದಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!