ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಕೋಟ್ಯಂತರ ಗೃಹಲಕ್ಷ್ಮಿಯರಿಗೆ ಹೊಸ ವರ್ಷದ ಸಂಭ್ರಮಕ್ಕೂ ಮೊದಲೇ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬಹಳ ದಿನಗಳಿಂದ ಕಾಯುತ್ತಿದ್ದ ಯೋಜನೆಯ ಹಣ ಬಿಡುಗಡೆಗೆ ಕೊನೆಗೂ ಚಾಲನೆ ಸಿಕ್ಕಿದ್ದು, ಸೋಮವಾರದಿಂದಲೇ (ಡಿಸೆಂಬರ್ 22) ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, “ಆರ್ಥಿಕ ಇಲಾಖೆಯಿಂದ ಈಗಾಗಲೇ 24ನೇ ಕಂತಿನ ಹಣ ಬಿಡುಗಡೆಯಾಗಿದೆ. ನಾನು ಯಾವಾಗಲೂ ಕಂತುಗಳ ಲೆಕ್ಕದಲ್ಲೇ ಮಾತನಾಡುತ್ತೇನೆ. ಸೋಮವಾರದಿಂದ ಆರಂಭವಾಗಿ ಮುಂದಿನ ಶನಿವಾರದ ಒಳಗೆ ರಾಜ್ಯದ ಎಲ್ಲಾ 1.26 ಕೋಟಿ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ತಲುಪಲಿದೆ,” ಎಂದು ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಹಣ ಬಾರದೆ ಆತಂಕದಲ್ಲಿದ್ದ ಮಹಿಳೆಯರಿಗೆ ಈ ಸುದ್ದಿ ನಿರಾಳ ತಂದಿದೆ. ಆದರೆ, ಸಚಿವರು ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ಹಣದ ಬಗ್ಗೆ ಯಾವುದೇ ನಿರ್ದಿಷ್ಟ ಸ್ಪಷ್ಟನೆ ನೀಡಿಲ್ಲ. ಸದ್ಯಕ್ಕೆ 24ನೇ ಕಂತಿನ ಹಣ ಮಾತ್ರ ವಿತರಣೆಯಾಗುತ್ತಿದ್ದು, ಹಂತ ಹಂತವಾಗಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

