ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಷ್ಟಾರ್ಥ ಸಿದ್ದಿ, ಕಷ್ಟಗಳ ಪರಿಹಾರಕ್ಕಾಗಿ ಕಟೀಲಮ್ಮನಿಗೆ ಹರಕೆ ಹೊತ್ತು, ಭಕ್ತರು ಯಕ್ಷಗಾನ ಬಯಲಾಟ ಆಡಿಸುವುದು ಸಾಮಾನ್ಯ. ಹೀಗೆಯೇ ನಿಡ್ಡೋಡಿಯಲ್ಲಿ ಭೂಮಿ ಉಳಿಸಿಕೊಟ್ಟದ್ದಕ್ಕೆ ಹರಕೆ ಹೊತ್ತವರಿಂದ ಕಟೀಲು ಮೇಳದ ಬಯಲಾಟ ನಡೆಸಲು ನಿರ್ಧರಿಸಿದ್ದಾರೆ.
11 ವರ್ಷಗಳ ಹಿಂದೆ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರಕ್ಕಾಗಿ ಸರಕಾರ ಯೋಜನೆ ರೂಪಿಸಿದ್ದು, ಮಂಗಳೂರು ತಾಲೂಕಿನ ನಿಡ್ಡೋಡಿಯಲ್ಲಿ ಸುಮಾರು 1200 ಎಕರೆ ಭೂಮಿಯನ್ನು ಸ್ವಾಧೀನಪಡಿಸಲು ಮುಂದಾಗಿತ್ತು. ಈ ಸಂದರ್ಭ ಗ್ರಾಮಸ್ಥರೆಲ್ಲ ಸೇರಿಕೊಂಡು ಮಾತೃಭೂಮಿ ಸಂರಕ್ಷಣಾ ಸಮಿತಿಯನ್ನು ರೂಪಿಸಿ ಅದರ ಮೂಲಕ ಸತತ ಹೋರಾಟಗಳನ್ನು ಮಾಡಿದರು. ನಮ್ಮ ಭೂಮಿಯನ್ನು ಉಳಿಸಿಕೊಡುವಂತೆ ಕಟೀಲಮ್ಮನಿಗೆ ಯಕ್ಷಗಾನ ಬಯಲಾಟದ ಹರಕೆಯನ್ನೂ ಹೊತ್ತರು.
ಈಗ ಭೂಸ್ವಾಧೀನದ ಪ್ರಕ್ರಿಯೆ ನಿಂತಿದೆ. ಹರಕೆ ಫಲಿಸಿದ್ದಕ್ಕಾಗಿ ವಿಜೃಂಭಣೆಯ ಯಕ್ಷಗಾನ ಸೇವೆ ನಿಡ್ದೋಡಿಯಲ್ಲಿ ಫೆಬ್ರವರಿ 13 ನಡೆಯುತ್ತಿದೆ.
ಸರಕಾರ ಭೂಸ್ವಾಧೀನಕ್ಕೆ ಮುಂದಾದಾಗ ನಾವು ಗ್ರಾಮಸ್ಥರು ಸೇರಿಕೊಂಡು ಕಟೀಲು ದುರ್ಗೆ ಮತ್ತು ಇಲ್ಲಿನ ದೈವ ದೇವರಿಗೆ ಹರಕೆ ಸಲ್ಲಿಸಿದ್ದೇವೆ. ಈ ಕಾರಣದಿಂದ ನಮ್ಮ ಭೂಮಿ ಇಂದು ಉಳಿದಿದೆ.
ದೈವ ದೇವರ ಕಾರಣಿಕದಿಂದಲೇ ನಮ್ಮ ಭೂಮಿ ಉಳಿಯಲು ಕಾರಣ. ದೈವಗಳ ಸಾನಿಧ್ಯವನ್ನು ಜೀರ್ಣೋದ್ದಾರ ಮಾಡಿದ್ದೇವೆ. ಇದೀಗ ಕಟೀಲು ದುರ್ಗೆಗೆ ಯಕ್ಷಗಾನ ಸೇವೆ ಸಲ್ಲಿಸುತ್ತಿದ್ದೇವೆ ಎಂದು ಸ್ಥಳೀಯರಾದ ಜನಾರ್ದನ ತಿಳಿಸಿದ್ದಾರೆ.