ಕೊಡಗಿನಲ್ಲಿ ಭೂ ಪರಿವರ್ತನೆ ಸಲ್ಲದು: ಕರ್ನಲ್ ಮುತ್ತಣ್ಣ

ಹೊಸದಿಗಂತ ವರದಿ, ಮಡಿಕೇರಿ:

ಜಿಲ್ಲೆ, ಹೊರ ಜಿಲ್ಲೆ, ರಾಜ್ಯಗಳ ಎಂಟು ಕೋಟಿ ಮಂದಿಗೆ ನೀರುಣಿಸುವ ‘ಕಾವೇರಿ’ ನದಿಯ ಜಲಾನಯದ ಪ್ರದೇಶವಾಗಿರುವ ‘ಕೊಡಗು’ ಜಿಲ್ಲೆಯ ಕೃಷಿ ಭೂಮಿಗಳನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಕರ್ನಲ್ ಸಿ.ಪಿ.ಮುತ್ತಣ್ಣ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಭೂ ಪರಿವರ್ತನೆಯ ನಿಯಮಗಳನ್ನು ಸರಳೀಕರಿಸಿ, ವಾರದ ಅವಧಿಯಲ್ಲೇ ಭೂ ಪರಿವರ್ತನೆ ಮಾಡಿಕೊಡುವುದಾಗಿ ರಾಜ್ಯದ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಪರಿವರ್ತನೆ ಮಾಡಿಕೊಟ್ಟಲ್ಲಿ ಅದು ಕಾವೇರಿ ನದಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಬಹುದು. ಕಾವೇರಿ ನೀರನ್ನು ಅವಲಂಬಿಸಿರುವ ಕೋಟ್ಯಂತರ ಜನರಿಗೆ ಇದರಿಂದ ಅನ್ಯಾಯವಾಗಲಿದೆ ಎಂದು ತಿಳಿಸಿದರು.
ಕೊಡಗಿನ ಕಾಫಿ ತೋಟ, ಗದ್ದೆ, ಜಮ್ಮಾ ಮತ್ತು ಸಾಗು ಭೂಮಿ, ಬಾಣೆಗೆ ಸಂಬಂಧಿಸಿದಂತೆ ಭೂ ಪರಿವರ್ತನೆಗಳು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ನಿಬಂಧನೆಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಡಿಟರ್ ಜನರಲ್‍ರ ಕಚೇರಿಯಿಂದ 2018ರ ಮಾ.16 ರಂದು ಅಂದಿನ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ ಪತ್ರದಲ್ಲಿಯೂ ಉಲ್ಲೇಖವಾಗಿದ್ದು, ಭೂ ಪರಿವರ್ತನೆ ಕಾನೂನು ಬಾಹಿರವೆಂಬುದನ್ನು ಸ್ಪಷ್ಟಪಡಿಸಲಾಗಿದೆ ಎಂದು ಗಮನ ಸೆಳೆದರು.
ನಮ್ಮ ವಿರೋಧವಿಲ್ಲ: ಜಿಲ್ಲೆಯ ಕೃಷಿ ಭೂಮಿಗಳನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸಿಕೊಂಡು ಅದನ್ನು ರೆಸಾರ್ಟ್‌ಗಳನ್ನಾಗಿ ಮತ್ತು ಲೇಔಟ್‍ಗಳನ್ನಾಗಿ ಪರಿವರ್ತಿಸುವುದಕ್ಕೆ ನಮ್ಮ ವಿರೋಧವಿದೆ. ಆದರೆ, ಕಾಫಿ ತೋಟಗಳಲ್ಲಿ ಕೃಷಿಕರು ತಮ್ಮ ಅನುಕೂಲಕ್ಕಾಗಿ ಸಣ್ಣ ಪ್ರಮಾಣದ ಜಾಗವನ್ನು ಪರಿವರ್ತಿಸಿಕೊಳ್ಳುವುದಕ್ಕೆ ಅಲ್ಲವೆಂದು ಸ್ಪಷ್ಟಪಡಿಸಿದರು.
ಭೂ ಪರಿವರ್ತನೆ ಜಿಲ್ಲೆಯ ನಗರೀಕರಣಕ್ಕೆ ಒತ್ತು ನೀಡುವುದರೊಂದಿಗೆ, ಪರೋಕ್ಷವಾಗಿ ಕಾವೇರಿ ನದಿಗೆ ಧಕ್ಕೆಯನ್ನುಂಟುಮಾಡುತ್ತದೆ. ಈಗಾಗಲೇ ದಕ್ಷಿಣ ಕೊಡಗಿನ ಗೋಣಿಕೊಪ್ಪಲು, ಪೊನ್ನಂಪೇಟೆ ಬಹುತೇಕ ಒಂದೇ ಪಟ್ಟಣವಾಗಿ ಸೇರಿ ಹೋಗಿದೆ. ಭವಿಷ್ಯದಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿ, ಸಂಟಿಕೊಪ್ಪ, ಕುಶಾಲನಗರಗಳು ಬೆಳೆದು ಒಂದೇ ನಗರವಾಗಿ ರೂಪುಗೊಳ್ಳುವ ಅಪಾಯವಿದೆ. ಈ ನಗರೀಕರಣ ಕಾವೇರಿ ಜಲಾನಯನ ಪ್ರದೇಶಕ್ಕೆ ತೊಡಕನ್ನು ಉಂಟುಮಾಡುತ್ತದೆ ಎಂದು ಹೇಳಿದರು.
ವೀರಾಜಪೇಟೆ ಸಮೀಪದ ಬಿಟ್ಟಂಗಾಲ ಮತ್ತು ಗೋಣಿಕೊಪ್ಪಲು ಬಳಿಯ ಹಾತೂರಿನಲ್ಲಿ ಬೃಹತ್ ಸಂಸ್ಥೆಗಳು ವಾಣಿಜ್ಯ ಸೈಟ್‍ಗಳ ಯೋಜನೆಯನ್ನು ಹೊಂದಿದ್ದು, ಇಂತಹ ಯೋಜನೆ ಕೈಬಿಡುವಂತೆ ನಾವು ಆ ಸಂಸ್ಥೆಯವರನ್ನು ವಿನಂತಿಸುವುದಾಗಿ ಕರ್ನಲ್ ಸಿ.ಪಿ.ಮುತ್ತಣ್ಣ ತಿಳಿಸಿದರು.
ಪ್ರವಾಸಿಗರ ಒತ್ತಡ ಕಾರಣ: ಹಿಮಾಚಲ ಪ್ರದೇಶದ ಜೋಶಿ ಮಠ್‍ನಲ್ಲಿ ಭೂಮಿ ಬಿರುಕು ಬಿಟ್ಟು ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿದೆ. ಇದು ಅತಿಯಾದ ಪ್ರವಾಸಿಗರ ಒತ್ತಡದಿಂದ ಸೃಷ್ಟಿಯಾದದ್ದೆಂದು ಅಭಿಪ್ರಾಯಪಟ್ಟ ಅವರು, ಕೊಡಗಿನಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 38 ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರು, 40 ಸಾವಿರಕ್ಕೂ ಹೆಚ್ಚಿನ ವಾಹನಗಳು ಆಗಮಿಸಿವೆ. ದಿನದಿಂದ ದಿನಕ್ಕೆ ಕೊಡಗಿನ ಮೇಲೆ ಪ್ರವಾಸಿಗರ ಒತ್ತಡ ಹೆಚ್ಚುತ್ತಿದ್ದು, ಇದು ಮುಂದುವರೆದಲ್ಲಿ ಜೋಶಿ ಮಠ್ ರೀತಿಯಲ್ಲಿ ಸ್ಥಳೀಯರು ಜಾಗ ಖಾಲಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಬಹುದೆಂದು ಎಚ್ಚರಿಕೆಯ ಮಾತುಗಳನ್ನಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ರಾಯ್ ಬೋಪಣ್ಣ ಹಾಗೂ ಶ್ಯಾನ್ ಬೋಪಯ್ಯ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!