ಹೊಸದಿಗಂತ ವರದಿ,ಕಲಬುರಗಿ:
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ರಾಘವ ಚೈತನ್ಯ ಲಿಂಗವಿರುವ ಸ್ಥಳವನ್ನು ಮುಸ್ಲೀಮರು ಅತೀಕ್ರಮಣ ಮಾಡಿಕೊಂಡಿದ್ದು,ಲಿಂಗದ ಪಕ್ಕದಲ್ಲಿ ಗೋರಿ ನಿರ್ಮಿಸಿ ಲ್ಯಾಂಡ್ ಜಿಹಾದ್ ಮಾಡಲಾಗುತ್ತಿದೆ ಎಂದು ಶ್ರೀರಾಮಸೇನೆ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ರಾಘವ ಚೈತನ್ಯ ಲಿಂಗಕ್ಕೆ ಶಿವರಾತ್ರಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಸ್ಲಿಮರು ಲ್ಯಾಂಡ್ ಜಿಹಾದ್ ಮಾಡುತ್ತಿದ್ದಾರೆ. ಸಮಾಧಿ ಸ್ಥಳದಲ್ಲಿ ಅಕ್ರಮವಾಗಿ ಚಾದರ್ ಹಾಕಿ ಲಿಂಗದ ಸಮೀಪಕ್ಕೆ ಬರುತ್ತಿದ್ದಾರೆ. ಕಳೆದ ಬಾರಿ 15 ಜನ ಆರಾಮಾಗಿ ಪೂಜೆ ಮಾಡಿದ್ಧೇವು. ಈ ಬಾರಿ ಬ್ಯಾರಿಕೇಡ್ ಹಾಕಿ ಒತ್ತುವರಿ ಮಾಡಿದ್ದಾರೆ. ಕೋರ್ಟ್ ಅನುಮತಿ ನೀಡಿದರೂ, ಸ್ವಚ್ಛಂದವಾಗಿ ಪೂಜೆಗೆ ಅವಕಾಶ ಕೊಟ್ಟಿಲ್ಲ. ಪೊಲೀಸರು ಲ್ಯಾಂಡ್ ಜಿಹಾದ್ ಗೆ ಸಾಥ್ ನೀಡಿದ್ದಾರೆ ಎಂದು ಆರೋಪಿಸಿದರು.
ಈ ಬಾರಿ ಕಲಬುರಗಿ ಹೈಕೋರ್ಟ್ ಪೀಠದ ಆದೇಶದಂತೆ ಗಂಗಾ, ವಿಘ್ನೇಶ್ವರ, ಮಹಾರುದ್ರಾಭಿಷೇಕವನ್ನು ಮಾಡಿದ್ದು, ಸಂಭ್ರಮದಿಂದ ಶಿವಲಿಂಗ ಪೂಜೆ ನೆರವೇರಿದೆ. ಶೀಘ್ರದಲ್ಲೇ ಕೋರ್ಟ್ ನಲ್ಲಿ ನ್ಯಾಯ ಪಡೆದು ಮಂದಿರಕ್ಕೆ ಅಡಿಗಲ್ಲು ಹಾಕುತ್ತೇವೆ ಎಂದು ಹೇಳಿದರು.
ಈ ಸಂದರ್ಭ ಕಡಗಂಚಿಯ ವೀರಭದ್ರ ಶಿವಾಚಾರ್ಯರು,ಶಾಸಕ ಅವಿನಾಶ್ ಜಾಧವ್,ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಸುಭಾಷ್ ಗುತ್ತೇದಾರ್, ನಗರಾಧ್ಯಕ್ಷ ಚಂದು ಪಾಟೀಲ್, ಗ್ರಾಮಾಂತರ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಹರ್ಷಾನಂದ ಗುತ್ತೇದಾರ್, ವಿಶ್ವ ಹಿಂದೂ ಪರಿಷತ್ತಿನ ಗೌರವಾಧ್ಯಕ್ಷ ಲಿಂಗರಾಜಪ್ಪಾ ಅಪ್ಪಾ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ನಾಗೇಂದ್ರ ಕಾಬಡೆ, ವಿಭಾಗದ ಸಂಘಟನಾ ಕಾರ್ಯದರ್ಶಿ ಅರುಣ್ ಬಿನ್ನಾಡಿ ಸೇರಿದಂತೆ ಹಲವು ಬಿಜೆಪಿ ಹಾಗೂ ಹಿಂದೂ ಮುಖಂಡರು ಉಪಸ್ಥಿತರಿದ್ದರು.