ಹೊಸದಿಗಂತ ವರದಿ, ಹುಬ್ಬಳ್ಳಿ:
ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಬ್ರಗಾಂಜಾ ಘಾಟ್ನ ಕ್ಯಾಸಲ್ರಾಕ್ – ಕರಂಜೊಲ್ ನಿಲ್ದಾಣಗಳ ಮಧ್ಯೆ ಉಂಟಾಗಿದ್ದ ಭೂಕುಸಿತ ತೆರುವು ಕಾರ್ಯಾಚರಣೆ ಯಶಸ್ವಿಯಾಗಿ ಮುಗಿದಿದೆ.
ಮಂಗಳವಾರ ನಿರಂತರ ಮಳೆ ಸುರಿದಿದ್ದರಿಂದ ರೈಲು ಮಾರ್ಗದ ಮಧ್ಯೆ ಏಕಾಏಕಿ ಭಾರೀ ಭೂಕುಸಿತವಾಗಿತ್ತು. ತಕ್ಷಣ ಭೂ ಕುಸಿತ ಕಾರ್ಯಾಚರಣೆ ಅಣಿಯಾಗಿದ್ದ ರೈಲ್ವೆ ಸಿಬ್ಬಂದಿ ಮೂರು ದಿನದ ನಿರಂತರ ಪರಿಶ್ರಮದಿಂದ ರೈಲು ಸಂಚಾರಕ್ಕೆ ಮುಕ್ತವಾಗಿದೆ.
ರೈಲ್ವೆಯ ನೂರಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಅಧಿಕಾರಿಗಳು ಭೂಕುಸಿತವಾದ ಸ್ಥಳದಲ್ಲಿ ಬೀಡು ಬಿಟ್ಟಿದ್ದರು. ಐದು ಹಿಟಾಚಿ, ಅಥವೂವರ್ ಯಂತ್ರಗಳ ಬಳಸಿಕೊಳ್ಳುವ ಮೂಲಕ ಬಂಡೆ, ಮರ, ಗಿಡ ಗಂಟಿಗಳನ್ನು ತೆರವು ಮಾಡಲಾಗಿದೆ.
ಈ ಮಾರ್ಗದಲ್ಲಿ ರಸ್ತೆ ಇಲ್ಲದ ಕಾರಣ ಹಾಗೂ ನಿರಂತರ ಮಳೆಯಿಂದ ರೈಲ್ವೆ ಸಿಬ್ಬಂದಿಗೆ ಸ್ವಲ್ಪ ಅಡೆತಡೆ ಉಂಟಾಗಿದ್ದು, ಅಷ್ಟಾದರೂ ಧೃತಿಗೆಡದೆ ಸಿಬ್ಬಂದಿ ತೆರವು ಕಾರ್ಯ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಬ್ಬಂದಿಯ ಕಾರ್ಯಕ್ಕೆ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳು ಶ್ಲಾಘಿಸಿದ್ದಾರೆ.