ದೋಣಿಗಲ್ ರೈಲು ಮಾರ್ಗದಲ್ಲಿ ಭೂಕುಸಿತ: ಕ್ರಿಬ್ ಮಾದರಿ ಗೋಡೆ ನಿರ್ಮಾಣ ಕಾರ್ಯ ಪೂರ್ಣ!

ಹೊಸದಿಗಂತ ವರದಿ, ಮಂಗಳೂರು:

ಮಂಗಳೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ-ಕಡಗರವಳ್ಳಿ ನಡುವಿನ ದೋಣಿಗಲ್ ಎಂಬಲ್ಲಿ ರೈಲು ಮಾರ್ಗದಲ್ಲಿ ಉಂಟಾಗಿರುವ ಭೂಕುಸಿತದ ದುರಸ್ತಿ ಕಾರ್ಯ ನಡೆಯುತ್ತಿದೆ.ರೈಲ್ವೆ ಸಂಚಾರ ಮರುಸ್ಥಾಪನೆ ಮಾಡಲು ಇಲಾಖೆ ಸಮರೋಪಾದಿಯಲ್ಲಿ ಶ್ರಮಿಸುತ್ತಿದೆ. ಶನಿವಾರ ಭಾರೀ ಮಳೆಯ ನಡುವೆ ಕುಸಿತಗೊಂಡ ಜಾಗದಲ್ಲಿ ಕ್ರಿಬ್ ಮಾದರಿ ಗೋಡೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಮುಂದೆ ಇಲ್ಲಿ ಕಾಂಕ್ರಿಟ್ ಕಾಮಗಾರಿ ನಡೆಯಲಿದೆ.

ತೊಟ್ಟಿಲಾಕಾರದ ಗೋಡೆ
ಮರಳಿನ ಚೀಲ, ಬೋಲ್‌ಡ್ರಾಸ್ ಕಲ್ಲು ಮತ್ತು ನೆಟ್ ಸೇರಿದಂತೆ ಇತರ ವಸ್ತುಗಳನ್ನು ಅಳವಡಿಸಿ ಬಲಿಷ್ಠವಾದ ಗೇಬಿಯನ್ ಗೋಡೆಗಳನ್ನು ಕುಸಿತದ ಸ್ಥಳದಲ್ಲಿ ನಿರ್ಮಿಸಲಾಗಿದೆ.ಕ್ರಿಬ್ ಅಥವಾ ತೊಟ್ಟಿಲು ಆಕಾರದಲ್ಲಿ ಕುಸಿತದ ಸ್ಥಳದಿಂದ ಕೆಳಭಾಗಕ್ಕೆ ನಿರ್ಮಿಸಲಾಗಿದೆ.ಬಂಡೆ ಮತ್ತು ಬೋಲ್ಡ್ರಾಸ್ ಕಲ್ಲು, ಮರಳಿನ ಚೀಲಗಳನ್ನು ಬಳಸಿ ಹಲವು ಹಂತದಲ್ಲಿ ಕೆಳಗಿನ ತನಕ ಬಲಿಷ್ಠವಾದ ಗೋಡೆ ನಿರ್ಮಿಸಲಾಗಿದೆ. ಇದಕ್ಕಾಗಿ ಲಕ್ಷಕ್ಕೂ ಅಧಿಕ ಮರಳಿನ ಚೀಲಗಳನ್ನು 2000 ಘನ ಮೀಟರ್ ಗೂ ಬಂಡೆಗಳನ್ನು ಉಪಯೋಗಿಸಲಾಗಿದೆ. 170ಕ್ಕೂ ಅಧಿಕ ರೈಲುಗಳ ಮೂಲಕ ಆಗಮಿಸಿದ ಕಲ್ಲು, ಮರಳಿನ ಚೀಲ ಮತ್ತು ಇತರ ವಸ್ತುಗಳನ್ನು ಬಳಸಲಾಗಿದೆ.

ಬಂಡೆಕಲ್ಲು, ಬೋಲ್‌ಡ್ರಾಸ್ ಕಲ್ಲು, ಮರಳಿನ ಚೀಲ ಮತ್ತು ನೆಟ್‌ಗಳನ್ನು ಉಪಯೋಗಿಸಿಕೊಂಡು ಕೆಳಭಾಗದಿಂದಲ್ಲೇ ಬಲಿಷ್ಠವಾಗಿ ತೊಟ್ಟಿಲಾಕಾರದಲ್ಲಿ ಗೋಡೆ ನಿರ್ಮಿಸಲಾಗಿದೆ.ತಳಭಾಗದಲ್ಲಿ ಮರಳು ಮತ್ತು ಬಂಡೆಗಳ ಸಾಲಿಗೆ ನೆಟ್‌ಗಳನ್ನು ಅಳವಡಿಸಿ ಬಲಿಷ್ಠಗೊಳಿಸಲಾಗಿದೆ.ಭೂಕುಸಿತವಾದ ಸ್ಥಳದಲ್ಲಿ ಬಲಿಷ್ಠವಾದ ನೆಟ್‌ನಿಂದಲೇ ಗೋಡೆ ನಿರ್ಮಿಸಲಾಗಿದೆ.15 ಕ್ಕೂ ಅಧಿಕ ಸಾಲಿನಲ್ಲಿ ತೊಟ್ಟಿಲಾಕಾರದಲ್ಲಿ ಗೋಡೆ ನಿರ್ಮಿತವಾಗಿದೆ.

ಕಾಂಕ್ರೀಟ್ ತಡೆಗೋಡೆ
ಕುಸಿತಗೊಂಡ ಸ್ಥಳದಲ್ಲಿ ರೈಲು ಹಳಿಯ ಬದಿಯಲ್ಲಿ ಕಾಂಕ್ರಿಟ್ ತಡೆಗೋಡೆ ನಿರ್ಮಿಸುವ ಕಾರ್ಯ ಶನಿವಾರ ಆರಂಭಗೊಂಡಿದೆ. ಈ ಕಾಮಗಾರಿ ಮುಗಿದ ಬಳಿಕ ಕೆಲವು ಅಂತಿಮ ಹಂತದ ಕಾಮಗಾರಿ ನಡೆಯಲಿದೆ.ಈ ಮೂಲಕ ದುರಸ್ಥಿ ಕಾರ್ಯ ಪೂರ್ಣವಾಗಲಿದೆ. ಬಳಿಕ ಗುಣಮಟ್ಟ ಪರೀಕ್ಷೆ ನಡೆಯಲಿದೆ. ನಂತರ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.

ಈಗಾಗಲೇ 6 ತಾರೀಕಿನ ತನಕ ರೈಲು ಸಂಚಾರ ಸ್ಥಗಿತಗೊಂಡಿದ್ದು ,ಈ ದಿನಾಂಕದ ಬಳಿಕವೇ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!