ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮಧ್ಯಾಹ್ನ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ 5 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ.
ಈ ಘಟನೆಯ ನಂತರ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಪವಿತ್ರ ದೇವಾಲಯವಾದ ವೈಷ್ಣೋದೇವಿಗೆ ತೀರ್ಥಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಅರ್ಧಕುವರಿಯ ಇಂದರಪ್ರಸ್ಥ ಭೋಜನಾಲಯದ ಬಳಿ ಸಂಭವಿಸಿದ ದುರಂತ ಭೂಕುಸಿತದಲ್ಲಿ 5 ಜನರು ಸಾವನ್ನಪ್ಪಿದ್ದಾರೆ ಮತ್ತು 14 ಜನರು ಗಾಯಗೊಂಡಿದ್ದಾರೆ. ಈ ಘಟನೆಯ ಸಮಯದಲ್ಲಿ, ಸುಮಾರು 12ರಿಂದ 15 ಯಾತ್ರಿಕರು ಆ ಸ್ಥಳದಲ್ಲಿದ್ದರು. ಆರಂಭದಲ್ಲಿ ಎರಡು ಶವಗಳನ್ನು ಹೊರತೆಗೆದು ಕತ್ರಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಂಭೀರವಾಗಿ ಗಾಯಗೊಂಡ ಹಲವಾರು ಜನರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ.
ರಾತ್ರಿಯಿಡೀ ಬಿದ್ದ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿದ್ದು, ಯಾತ್ರಿಕರ ಸುರಕ್ಷತೆಯ ದೃಷ್ಟಿಯಿಂದ ವೈಷ್ಣೋದೇವಿ ದೇವಾಲಯ ಮಂಡಳಿಯು ವೈಷ್ಣೋ ದೇವಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪ್ರವಾಹ ಆತಂಕ ಹೆಚ್ಚುತ್ತಲೇ ಇರುವುದರಿಂದ ಜಮ್ಮು ಮತ್ತು ಕಾಶ್ಮೀರದ ಹಲವಾರು ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಜಾರಿ ಮಾಡಲಾಗಿದೆ.