ಹೊಸದಿಗಂತ ವರದಿ,ಮಂಡ್ಯ :
ಸುಮಲತಾ ಅವರು ಕಳೆದ ಬಾರಿ ಕಾಂಗ್ರೆಸ್ ಮತಗಳಿಂದಲೇ ಗೆದ್ದಿದ್ದಾರೆ. ಈ ಬಾರಿ ಸುಮಲತಾ, ಕುಮಾರಸ್ವಾಮಿ ಆಗಲೀ, ಅಪವಿತ್ರ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರಿಗೆ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಮಂಡ್ಯ ವಿವಿ ಆವರಣದಲ್ಲಿ ನಡೆದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನ್ನಭಾಗ್ಯದ ಏಳು ಕೆ.ಜಿ. ಅಕ್ಕಿಯನ್ನು ಐದು ಕೆಜಿಗೆ ಇಳಿಸಿದ ಯಡಿಯೂರಪ್ಪ ಅವರನ್ನು ಪ್ರಶ್ನೆ ಕೆಳಿದರೂ ಜಪ್ಪಯ್ಯ ಎಂದರೂ ಏರಿಕೆ ಮಾಡಲಿಲ್ಲ. ಇಂತಹವರನ್ನು ಗೆಲ್ಲಿಸಬೇಕೆ ಎಂದು ಪ್ರಶ್ನಿಸಿದರು.
ವಿಧಾನಸಭೆ, ಲೋಕಸಭೆ ಚುನಾವಣೆ ಯಾವುದೇ ಇರಲಿ, ಇಲ್ಲಿನ ಜನ ಬಹಳ ಉತ್ತಮವಾದ ತೀರ್ಮಾನ ಮಾಡುತ್ತಾರೆ. ಹಾಗಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರು ಕ್ಷೇತ್ರಗಳೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಒಂದು ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದ್ದೇವೆ. ರಾಜ್ಯದ ಜನ ನಿರೀಕ್ಷೆಗೂ ಮೀರಿ ಆಶೀರ್ವಾದ ಮಾಡಿ 136 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಕರ್ನಾಟಕದ ಮತದಾರರು ಪ್ರಬುದ್ಧವಾದ ತೀರ್ಮಾನ ಕೊಡುತ್ತಾರೆ. ಹಾಗಾಗಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಹೇಳಿದರು.
ಯಾರು ಎಷ್ಟೇ ಸುಳ್ಳು ಹೇಳಿದರೂ, ಭರವಸೆ ಕೊಟ್ಟರು, ದಾರಿ ತಪ್ಪಿಸಿದರೂ ಸಹ ಸರಿಯಾದ ತೀರ್ಮಾನ ಮಾಡುತ್ತಾರೆ. ಯಾರು ನುಡಿದಂತೆ ನಡೆಯುತ್ತಾರೆ. ಯಾರು ಕೊಟ್ಟ ಮಾತಿನಂತೆ ನಡೆದುಕೊಲ್ಳುತ್ತಾರೆ. ಅವರನ್ನು ಬೆಂಬಲಿಸಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಅದೇ ರೀತಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವವರ ಪರವಾಗಿ ನಡೆದುಕೊಳ್ಳುವುದೂ ನಿಮ್ಮ ಜವಾಬ್ದಾರಿ ಎಂದು ಸಲಹೆ ನೀಡಿದರು.