ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿಗೆ ನೀರು ಕೊಡಿಸುವುದು ನನ್ನ ಜೀವನದ ಕೊನೆಯ ಆಸೆಯಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಹೇಳಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿಂದು ಮಾತನಾಡಿದ ಗೌಡರು, ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನಸಂಖ್ಯೆ ಇದೆ. ನಮಗೆ 20 ಟಿಎಂಸಿ ನೀರು ಸಿಗುತ್ತಿದ್ದು, 50ಕ್ಕೂ ಅಧಿಕ ಟಿಎಂಸಿ ನೀರಿನ ಅಗತ್ಯವಿದೆ. ಕಾವೇರಿ, ಮಹದಾಯಿ, ಕೃಷ್ಣ ಮೂರು ಅಂತರ ರಾಜ್ಯ ವಿವಾದದಲ್ಲಿದೆ. ಮುಂದಿನ ತಿಂಗಳು ನೀರಿನ ಕೊರತೆಯಾಗಲಿದೆ ಎಂದರು.
ಕುಡಿಯುವ ನೀರಿನ ಅಗತ್ಯ ಬೆಂಗಳೂರಿಗೆ ಇದೆ, ಎಲ್ಲಿಂದ ತರುವುದು? ಮೋದಿ ಅವರು ಮಾತ್ರ ಈ ಸಮಸ್ಯೆ ಬಗೆಹರಿಸಲು ಸಾಧ್ಯ. ನಾನು ಮನಮೋಹನ್ ಸಿಂಗ್ ಅವರಿಗೆ ಭಿಕ್ಷೆ ಬೇಡಿದೆ, ಅದ್ರೆ ಅವರು ಆಗಲ್ಲ ಅಂದುಬಿಟ್ಟರು. ಮೋದಿ ಅವರು ಈ ಸಮಸ್ಯೆ ಬಗೆಹರಿಸಬಹುದು. ಬೆಂಗಳೂರಿಗೆ ನೀರು ಕೊಡಿಸುವುದು ನನ್ನ ಜೀವನದ ಕೊನೆಯ ಆಸೆಯಾಗಿದೆ ಎಂದು ನುಡಿದರು.
ಮೋದಿ 2ನೇ ಅವಧಿಯಲ್ಲೂ ಬಹುಮತ ಪಡೆದು ಪ್ರಧಾನಿಯಾದರು. ಮೂರನೇ ಅವಧಿಯಲ್ಲಿ ಬಹುಮತ ಬರದಿದ್ದರೂ ವಿಪಕ್ಷಗಳು ಬೆಂಬಲ ನೀಡಿದವು. ರಾಷ್ಟ್ರಪತಿಗಳ ಭಾಷಣದ ಮೇಲೆ ಮಾತನಾಡಲು ಸಾಕಷ್ಟು ಅಂಶಗಳಿವೆ. ಬಡವರು, ಮಧ್ಯಮ ವರ್ಗ, ಯುವಕರು ಮತ್ತು ಮಹಿಳೆಯರಿಗೆ ಮೋದಿ ಸರ್ಕಾರ ಆದ್ಯತೆ ನೀಡಿದೆ. ಒಂದು ಸುಸ್ಥಿರ ಸರ್ಕಾರ ಇದನ್ನು ಮಾಡುತ್ತಿದೆ. ಈ ಸರ್ಕಾರ 5 ವರ್ಷ ಮುಂದುವರಿಯಲಿದೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಪ್ರಧಾನಿ ಅವರಿಂದ ಯಾವ ಲಾಭ ಪಡೆದಿಲ್ಲ. ನಾನು ಯಾವತ್ತೂ ಅವರ ಮನೆಯ ಬಾಗಿಲಿಗೆ ಹೋಗಿಲ್ಲ. ಸಭಾಧ್ಯಕ್ಷರು ಒಬ್ಬ ರೈತರು, ನಾನು ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡಿದೆ. ದೇಶವನ್ನು ಹೇಗೆ ನಡೆಸಬೇಕು ನನಗೆ ಗೊತ್ತಿದೆ. ಆದ್ರೆ ಇಂದು ದೇವೇಗೌಡ ಅಥವಾ ಇನ್ಯಾರದು ಹೆಸರಿನಿಂದ ಭಾರತವನ್ನು ಜಾಗತಿಕ ದೇಶಗಳು ಗುರುತಿಸಿಲ್ಲ. ಮೋದಿ ಅವರಂತಹ ಅಗ್ರಗಣ್ಯ ನಾಯಕನಿಂದ ಇಡೀ ವಿಶ್ವ ಭಾರತವನ್ನು ಗುರುತಿಸಿದೆ ಎಂದು ಗುಣಗಾನ ಮಾಡಿದರು.