ಪಂಚಮಸಾಲಿ ಪ್ರತಿಭಟನೆ ಮೇಲೆ ಲಾಠಿ ಚಾರ್ಜ್: ಸರಕಾರ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿಯಲ್ಲಿ ಸುವರ್ಣಸೌಧ ಬಳಿ ಪ್ರತಿಭಟನೆ ನಡೆಸಲು ಬಂದ ಪಂಚಮಸಾಲಿ ಸಮುದಾಯದ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ಹಾಗೂ ಮುಖಂಡರ ಮೇಲೆ ಲಾಠಿ ಚಾರ್ಜ್ ನಡೆದಿದ್ದು, ಸರಕಾರದ ಈ ನಡೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು, ಪಂಚಮಸಾಲಿ ಬಂಧುಗಳ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರಕಾರ ಅಡಾಲ್ಫ್ ಹಿಟ್ಲರ್ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ. ಸಂತರು, ಪಂಚಮಸಾಲಿ ಸಮುದಾಯ ಜಗದ್ಗುರುಗಳಾದ ಶ್ರೀ ಬಸವ ಮೃತ್ಯುಂಜಯ ಮಹಾಸ್ವಾಮೀಜಿಗಳನ್ನು ಅತ್ಯಂತ ಹೇಯವಾಗಿ ನಡೆಸಿಕೊಂಡಿರುವುದು ನನಗೆ ಅತೀವ ನೋವುಂಟು ಮಾಡಿದೆ. ಇದು ಶಿಲಾಯುಗ ಕಾಲದ ಮನಃಸ್ಥಿತಿಯ ಸರಕಾರ ಎಂದು ಹರಿಹಾಯ್ದಿದ್ದಾರೆ.

ತಮ್ಮ ಬೇಡಿಕೆಗಳ ಬಗ್ಗೆ ಪೂಜ್ಯ ಸ್ವಾಮೀಜಿ ಅವರು, ಸಮುದಾಯದ ಪ್ರಮುಖರು ನಿರಂತರವಾಗಿ ಸರಕಾರಕ್ಕೆ ಮನವಿ ಮಾಡುತ್ತಲೇ ಇದ್ದರು. ಆದರೂ ಸರಕಾರ ಕಿವುಡಾಗಿತ್ತು, ನಿರ್ಲಕ್ಷ್ಯ ವಹಿಸಿತ್ತು. ಶಾಂತಿಯುತವಾಗಿ ಪ್ರತಿಭಟಿಸಲು ಬಂದ ಸ್ವಾಮೀಜಿಗಳು, ಸಮುದಾಯದ ನಾಯಕರು, ಜನತೆಯ ಮೇಲೆ ದಬ್ಬಾಳಿಕೆ ನಡೆಸಿ ಪೊಲೀಸ್ ವಶಕ್ಕೆ ತೆಗೆದುಕೊಂಡ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರವೇ ಶಾಂತಿ ಕದಡುವ ದುಷ್ಪ್ರಯತ್ನ ಮಾಡಿದರೆ ಅದಕ್ಕೆ ಸರಕಾರವೇ ಪೂರ್ಣ ಹೊಣೆ. ಕೂಡಲೇ ಪೂಜ್ಯ ಸ್ವಾಮೀಜಿ ಅವರ ಹಾಗೂ ಸಮುದಾಯದ ಕ್ಷಮೆ ಕೇಳಬೇಕು ಹಾಗೂ ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸಬೇಕು ಎಂದಿರುವ ಅವರು, ಸಿದ್ದರಾಮಯ್ಯ ಅವರನ್ನು ಸರ್ವಾಧಿಕಾರಿ ಎಂದು ಕರೆದು ಅವರ ಸರ್ಕಾರವನ್ನು ತುಘಲಕ್ ಸರ್ಕಾರ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here