ಹೊಸ ದಿಗಂತ ವರದಿ, ಕೋಲಾರ:
ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಯಲುವಳ್ಳಿ ಗ್ರಾಮದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಮಲದ ಗುಂಡಿ ಸ್ವಚ್ಛಗೊಳಿಸಿದ ಸುದ್ದಿ ಪ್ರಸಾರವಾದ ಹಿನ್ನೆಲೆಯಲ್ಲಿ ವಸತಿ ಶಾಲೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀಲ್ ಎಸ್.ಹೊಸಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನ್ಯಾಯಾಧೀಶರು ಮಕ್ಕಳೊಂದಿಗೆ, ಶಿಕ್ಷಕರೊಂದಿಗೆ ಮತನಾಡಿ, ಮಾಹಿತಿ ಪಡೆದುಕೊಂಡರು ನಂತರ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಶ್ರೀನಿವಾಸ್, ತಹಶೀಲ್ದಾರ್ ಕೆ ರಮೇಶ್ ಎಸ್ಸಿಎಸ್ಟಿ ಸೆಲ್ ನ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಿ ಕೈಗೊಂಡ ಕ್ರಮದ ಕುರಿತು ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಸರ್ಕಾರ ಮಲ ಹೊರುವ ಪದ್ಧತಿ ಹಾಗು ಮಲದ ಗುಂಡಿ ಸ್ವಚ್ಛಗೊಳಿಸುವುದು ನಿಷೇಧಿಸಿದೆ ಆದರೆ ಇಲ್ಲಿನ ಪ್ರಾಂಶುಪಾಲರು ವಾರ್ಡನ್ ಚಿತ್ರಕಲಾ ಶಿಕ್ಷಕ ರು ಮಕ್ಕಳಿಂದ ಮಲದ ಗುಂಡಿಯನ್ನು ಸ್ವಚ್ಛಗೊಳಿಸಿರುವುದರ ಬಗ್ಗೆ ಈಗಾಗಲೇ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದರು.
ಪ್ರಾಂಶುಪಾಲರು ಹಾಗೂ ಶಿಕ್ಷಕರಿಂದ ಮಕ್ಕಳಿಂದಲೂ ಮಾಹಿತಿ ಪಡೆಯಲಾಗಿದೆ ಮೇಲಾಧಿಕಾರಿಗಳ ಆದೇಶದಂತೆ ಭಾನುವಾರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ, ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಕಳಪೆ ಗುಣಮಟ್ಟದ ಆಹಾರ ವಿತರಣೆ, ಮೂಲಭೂತ ಸವಲತ್ತುಗಳ ಕೊರತೆಯ ಬಗ್ಗೆಯೂ ಮಾಹಿತಿ ನೀಡಿದ್ದು ಘಟನೆಗೆ ಸಂಬಂಧಪಟ್ಟವರ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದರು.
ಅದರಂತೆ ಈಗಾಗಲೇ ಮೇಲಾಧಿಕಾರಿಗಳು ಪ್ರಾಂಶುಪಾಲೆ ಭಾರತಮ್ಮ, ಪ್ರಭಾರಿ ವಾರ್ಡನ್ ಮಂಜುನಾಥ್ ಚಿತ್ರಕಲೆ ಶಿಕ್ಷಕ ಮುನಿಯಪ್ಪ ಅವರನ್ನು ಅಮಾನತ್ತು ಗೊಳಿಸಿದ್ದು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ವಸತಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಬೇರೆ ವಸತಿ ಶಾಲೆಯಿಂದ ಸೋಮವಾರದೊಳಗೆ ಪ್ರಾಂಶುಪಾಲರು ಹಾಗೂ ಶಿಕ್ಷಕರನ್ನು ನಿಯೋಜಿಸಲಾಗುವುದು ತಮ್ಮ ಮಕ್ಕಳ ಬಗ್ಗೆ ಪೋಷಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಜಿಲ್ಲಾ ಅಟ್ರಾಸಿಟಿ ಸಮಿತಿ ಸದಸ್ಯ ಎನ್.ವೆಂಕಟರಾಮ್ ಮಾತನಾಡಿ ಪ್ರಾಂಶುಪಾಲರು ಹಾಗೂ ಶಿಕ್ಷಕರು ಮಕ್ಕಳಿಂದ ಮಲದ ಗುಂಡಿ ಸ್ವಚ್ಛ ಗೊಳಿಸಿರುವ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಘಟನೆಗೆ ಸಂಬಂಧಪಟ್ಟ ಪ್ರಾಂಶುಪಾಲರು ಶಿಕ್ಷಕ ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಂಡು ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಸತಿ ನಿಲಯದಲ್ಲಿ ಅಗತ್ಯವಿರುವ ಮೂಲಭೂತ ಸವಲತ್ತುಗಳನ್ನು ಒದಗಿಸುವಂತೆ ಒತ್ತಾಯಿಸಿದರು
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್ ಮಾಸ್ತಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ಪಿಎಸ್‌ಐ ಶಾಂತಮ್ಮ ಸ್ಥಳದಲ್ಲಿ ಹಾಜರಿದ್ದರು.