ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ LDF ಹೀನಾಯ ಸೋಲಿನಿಂದ ನೊಂದು ಎಲ್‌ಡಿಎಫ್ ಕಾರ್ಯಕರ್ತ ಬಾಬು ವರ್ಗೀಸ್ ಎಂಬುವವರು ತಮ್ಮ ಟ್ರೇಡ್‌ಮಾರ್ಕ್ ಆಗಿದ್ದ ಮೀಸೆಯನ್ನು ಬೋಳಿಸಿಕೊಂಡ ಘಟನೆ ನಡೆದಿದೆ.
ಪತ್ತನಂತಿಟ್ಟ ಪುರಸಭೆ ಚುನಾವಣೆಗೆ ಮುನ್ನ, ಈ ಭಾಗದಲ್ಲಿ ಎಲ್ ಡಿಎಫ್ ಅಧಿಕಾರವನ್ನು ಉಳಿಸಿಕೊಳ್ಳಲು ವಿಫಲವಾದರೆ ತಮ್ಮ ಮೀಸೆಯನ್ನು ಬೋಳಿಸಿಕೊಳ್ಳುವುದಾಗಿ ವರ್ಗೀಸ್ ಸಾರ್ವಜನಿಕವಾಗಿ ಪ್ರತಿಜ್ಞೆ ಮಾಡಿದ್ದರು.
ನಿನ್ನೆ ಫಲಿತಾಂಶ ಹೊರಬಿದ್ದ ಮೇಲೆ ಪತ್ತನಂತಿಟ್ಟ ಪುರಸಭೆಯಲ್ಲಿ ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಎಲ್‌ಡಿಎಫ್‌ಗೆ ದೊಡ್ಡ ಹೊಡೆತ ನೀಡಿತು. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಅಲೈಯನ್ಸ್ (UDF) ಜಿಲ್ಲೆಯ ಪತ್ತನಂತಿಟ್ಟ, ತಿರುವಲ್ಲಾ ಮತ್ತು ಪಂದಳ ಸೇರಿದಂತೆ ನಾಲ್ಕು ಪುರಸಭೆಗಳಲ್ಲಿ ಮೂರನ್ನು ಗೆದ್ದುಕೊಂಡಿತು. ಈ ಮೂರರಲ್ಲಿ, ಪತ್ತನಂತಿಟ್ಟ ಮತ್ತು ತಿರುವಲ್ಲಾ ಹಿಂದೆ ಎಡಪಕ್ಷಗಳ ವಶದಲ್ಲಿದ್ದವು.
ಇದಲ್ಲದೆ, 16 ಸದಸ್ಯರ ಜಿಲ್ಲಾ ಪಂಚಾಯತ್‌ನಲ್ಲಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಯುಡಿಎಫ್ ಅಧಿಕಾರವನ್ನು ತನ್ನದಾಗಿಸಿಕೊಂಡಿತು. ಈ ಹಿಂದೆ 12 ಸ್ಥಾನಗಳನ್ನು ಹೊಂದಿದ್ದ ಎಲ್ ಡಿಎಫ್ ಸ್ಥಾನ ನಾಲ್ಕಕ್ಕೆ ಇಳಿದಿದೆ.
ಚುನಾವಣಾ ಪ್ರಚಾರದ ಸಮಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಪಂಥ ಕಟ್ಟಿಕೊಂಡಿದ್ದ ವರ್ಗೀಸ್ ಈ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲ್ ಡಿಎಫ್ ಸೋತರೆ ಮೀಸೆ ತೆಗೆಸಿಕೊಳ್ಳುವುದಾಗಿ ವಾಗ್ದಾನ ಮಾಡಿಕೊಂಡಿದ್ದರು. ಜಿಲ್ಲೆಯಾದ್ಯಂತ ಯುಡಿಎಫ್ ಭರ್ಜರಿ ಗೆಲುವು ಸಾಧಿಸುವ ಸೂಚನೆ ನೀಡುತ್ತಿದ್ದಂತೆ, ಅವರು ಸ್ಥಳೀಯ ಸಲೂನ್‌ಗೆ ಹೋಗಿ ಮೀಸೆ ಬೋಳಿಸಿಕೊಂಡರು. ಜೋರಾದ ಹರ್ಷೋದ್ಗಾರಗಳು ಮತ್ತು ಶಿಳ್ಳೆಗಳ ನಡುವೆ ಆ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.

