ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶಿ ಉಗ್ರರಿಗೆ ಅಮೆರಿಕ ಶ್ವೇತ ಭವನ ಖಡಕ್ ಸೂಚನೆ ನೀಡಿದ್ದು, ನೀವೇ ದೇಶವನ್ನು ತೊರೆಯಿರಿ ಅಥವಾ ಜೈಲು ಶಿಕ್ಷೆಯನ್ನು ಅನುಭವಿಸಿ ಎಂದು ಎಚ್ಚರಿಕೆ ನೀಡಿದೆ.
ಟ್ರಂಪ್ ಆಡಳಿತವು ಏಲಿಯನ್ ಎನಿಮೀಸ್ ಆಕ್ಟ್ (AEA) ಬಳಸಿ ಗಡಿಪಾರು ಮಾಡುವುದನ್ನು ತಾತ್ಕಾಲಿಕವಾಗಿ ತಡೆಯುವ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಯುಎಸ್ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ಇದರ ಬೆನ್ನಲ್ಲೇ ಶ್ವೇತ ಭವನ ವಿದೇಶಿ ಉಗ್ರರಿಗೆ ಎಚ್ಚರಿಕೆ ಸಂದೇಶ ನೀಡಿದೆ.
ಈ ಕುರಿತು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿಕೆ ನೀಡಿದ್ದು, ಸುಪ್ರೀಂ ಕೋರ್ಟ್ ಟ್ರಂಪ್ ಆಡಳಿತಕ್ಕೆ ಭಾರೀ ಕಾನೂನು ಜಯವನ್ನು ನೀಡಿದೆ. ಏಲಿಯನ್ ಎನಿಮೀಸ್ ಆಕ್ಟ್ ಅಡಿಯಲ್ಲಿ ವಿದೇಶಿ ಭಯೋತ್ಪಾದಕರನ್ನು ದೇಶದಿಂದ ಹೊರ ಹಾಕಲು ನಮಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ರಾಕ್ಷಸ, ಎಡಪಂಥೀಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ವಾಗ್ದಾಳಿ ನಡೆಸಿದರು.
ಅಮೆರಿಕದಲ್ಲಿ ನೆಲೆಸಿರುವ ಉಗ್ರರು ಅವರಾಗಿಯೇ ದೇಶ ತೊರೆಯಬೇಕು. ಇಲ್ಲದಿದ್ದರೆ ಬಂಧಿಸಿ ಅವರ ದೇಶಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಕ್ಯಾರೋಲಿನ್ ಲೀವಿಟ್ ಕಟು ಪದಗಳಿಂದ ಎಚ್ಚರಿಕೆ ನೀಡಿದರು.