ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮೂಡಿದೆ. ಈ ಮಧ್ಯೆ ಚಿತ್ರತಂಡಕ್ಕೆ ಕಾನೂನು ಸಂಕಷ್ಟವೊಂದು ಎದುರಾಗಿದೆ. ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಸಿನಿಮಾ ಸೆಟ್ ಹಾಕಲಾಗಿದೆ ಎಂದು ಆರೋಪಿಸಿ ವಕೀಲ ಜಿ. ಬಾಲಾಜಿ ನಾಯ್ಡು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದಾರೆ.
ಈ ಸಂಬಂಧ ಚಿತ್ರ ನಿರ್ಮಿಸುತ್ತಿರುವ ಕೆವಿಎನ್ ಫಿಲ್ಮ್ ನಿರ್ಮಾಣ ಸಂಸ್ಥೆಗೆ ಹೈಕೋರ್ಟ್ ನೋಟಿಸ್ ನೀಡಿದೆ. ಜತೆಗೆ ಸರ್ಕಾರ ಮತ್ತು ಎಚ್ಎಂಟಿ ಕಂಪನಿಗೂ ನೋಟಿಸ್ ಜಾರಿ ಮಾಡಲಾಗಿದೆ. ಪೀಣ್ಯ ಪ್ಲಾಂಟೇಷನ್ ಜಮೀನಿನ 20.07 ಎಕರೆಯಲ್ಲಿ ಸಿನಿಮಾ ಸೆಟ್ ಹಾಕಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಅರಣ್ಯ ಭೂಮಿಯಲ್ಲಿ ಅನಧಿಕೃತವಾಗಿ ಸಿನಿಮಾ ಸೆಟ್ ನಿರ್ಮಾಣ ಮಾಡಲಾಗಿದ್ದು, ಇದನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಲಾಗಿದೆ. ಸದ್ಯ ನೋಟಿಸ್ ಜಾರಿಗೆ ಆದೇಶಿಸಿ ಸಿಜೆ ಎನ್.ವಿ.ಅಂಜಾರಿಯಾ, ನ್ಯಾ. ಕೆ.ವಿ.ಅರವಿಂದ್ ಅವರಿದ್ದ ಹೈಕೋರ್ಟ್ ಪೀಠ ವಿಚಾರಣೆಯನ್ನು ಆ. 19ಕ್ಕೆ ಮುಂದೂಡಿದೆ.
ಎಚ್ಎಂಟಿ ಸಂಸ್ಥೆ ಈ ಭೂಮಿಯನ್ನು ಕೆನರಾ ಬ್ಯಾಂಕ್‌ಗೆ ಮಾರಾಟ ಮಾಡಿತ್ತು. ಇದನ್ನು ಕೆನರಾ ಬ್ಯಾಂಕ್ ಕೆವಿಎನ್ ಸಿನಿಮಾ ನಿರ್ಮಾಣ ಸಂಸ್ಥೆಗೆ ನೀಡಿದೆ. ಇದು ಅರಣ್ಯ ಭೂಮಿ. ಇಲ್ಲಿ ಅನಧಿಕೃತವಾಗಿ ಸೆಟ್ ಹಾಕಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
2022ರಲ್ಲಿ ‘ಕೆಜಿಎಫ್ 2’ (KGF 2) ತೆರೆಕಂಡಿತ್ತು. ಅದಾಗಿ ಎರಡೂವರೆ ವರ್ಷ ಕಳೆದರೂ ಯಶ್ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಹೀಗಾಗಿ ಅಭಿಮಾನಿಗಳು ʼಟಾಕ್ಸಿಕ್ʼ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಅದಕ್ಕೆ ತಕ್ಕಂತೆ ಚಿತ್ರತಂಡವು ಇದುವರೆಗೆ ಯಾವ ಗುಟ್ಟನ್ನೂ ಬಿಟ್ಟುಕೊಡದೆ ಕುತೂಹಲವನ್ನು ಕಾಯ್ದುಕೊಂಡು ಬಂದಿದೆ. ಮಲಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಬರೋಬ್ಬರಿ 170 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಈ ಯಶ್ ಚಿತ್ರ ಡ್ರಗ್ ಮಾಫಿಯಾ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ಮೂಲಗಳು ತಿಳಿಸಿವೆ. 2025ರಲ್ಲಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ.