ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಗೋಪಾಲ್‌ಗ್ರಾಮ್‌ನಲ್ಲಿ ಚಿರತೆಯೊಂದು ಭೀಕರ ದಾಳಿ ನಡೆಸಿದ್ದು, ಐದು ವರ್ಷದ ಮುಗ್ಧ ಬಾಲಕನನ್ನ ಬಲಿ ಪಡೆದಿದೆ. ತಾಯಿಯ ಹಿಂದೆ ನಡೆದು ಹೋಗುತ್ತಿದ್ದ ಬಾಲಕನನ್ನು ಚಿರತೆ ಹೊಂಚು ಹಾಕಿ ಬೇಟೆಯಾಡಿರುವ ಘಟನೆ ಇಡೀ ಭಾಗದಲ್ಲಿ ಆತಂಕ ಮೂಡಿಸಿದೆ.
ಘಟನೆಯ ವಿವರ:
ಸಾಹಿಲ್ ಕತರ್ ಎಂಬ ಐದು ವರ್ಷದ ಬಾಲಕ ತನ್ನ ತಾಯಿಯ ಹಿಂದೆ ಹೊಲದಲ್ಲಿ ನಡೆದು ಹೋಗುತ್ತಿದ್ದನು. ಈ ವೇಳೆ ಪೊದೆಯೊಳಗೆ ಅವಿತಿದ್ದ ಚಿರತೆ ಹಠಾತ್ ದಾಳಿ ಮಾಡಿ ಬಾಲಕನನ್ನು ಕಚ್ಚಿ ಎಳೆದೊಯ್ದಿದೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಈ ನರಭಕ್ಷಕ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ತೀವ್ರ ಶೋಧ ನಡೆಸುತ್ತಿದೆ. “ಘಟನಾ ಸ್ಥಳದಲ್ಲಿ ಈಗಾಗಲೇ ಮೂರು ಬೋನುಗಳನ್ನು ಇರಿಸಲಾಗಿದ್ದು, ಸಿಬ್ಬಂದಿಗಳು ಹಗಲಿರುಳು ನಿಗಾ ವಹಿಸುತ್ತಿದ್ದಾರೆ,” ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರತಾಪ್ ಚಂದು ತಿಳಿಸಿದ್ದಾರೆ.
ಅಮ್ರೇಲಿ ಜಿಲ್ಲೆಯಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಜನರಲ್ಲಿ ಭಯ ಹುಟ್ಟಿಸಿದೆ. ಕಳೆದ ನವೆಂಬರ್ 28ರಂದು ಕೂಡ ದಲ್ಖನಿಯಾ ಅರಣ್ಯ ಪ್ರದೇಶದ ಬಳಿ ಒಂದು ವರ್ಷದ ಹೆಣ್ಣು ಮಗುವನ್ನು ಚಿರತೆ ಸಾಯಿಸಿತ್ತು. ಆ ಘಟನೆಯ ಮಾಸುವ ಮುನ್ನವೇ ಈಗ ಮತ್ತೊಂದು ಬಲಿ ಪಡೆದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

