ಹೊಸದಿಗಂತ ವರದಿ ದಾವಣಗೆರೆ:
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಚಿರತೆಯೊಂದು ಹಿಂಬದಿಯಿಂದ ಬಂದು ದಾಳಿ ಮಾಡಿರುವ ಘಟನೆ ಜಿಲ್ಲೆಯ ಜಗಳೂರು ತಾಲ್ಲೂಕು ಮರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಹೊನ್ನೂರಪ್ಪ ಎಂಬಾತನ ಮೇಲೆ ಚಿರತೆ ದಾಳಿ ನಡೆಸಿದೆ. ಎಂದಿನಂತೆ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದು ಚಿರತೆ ದಾಳಿ ಮಾಡಿದೆ. ಅದೃಷ್ಟವಶಾಂತ್ ಕೂಗಿಕೊಂಡಿದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಸಹಾಯಕ್ಕೆ ಬಂದಿದ್ದು, ಚಿರತೆ ಇವರನ್ನು ಬಿಟ್ಟು ಪರಾರಿಯಾಗಿದೆ.
ಗಾಯಾಳುವನ್ನು ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ದಾಳಿಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಶೀಘ್ರವೇ ಚಿರತೆಯನ್ನು ಸೆರೆ ಹಿಡಿದು ಬೇರೆ ಕಡೆಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದ್ದಾರೆ.