ಹೊಸದಿಗಂತ ದಾವಣಗೆರೆ
ಅಡಿಕೆ ತೋಟದಲ್ಲಿ ಬೀಡುಬಿಟ್ಟಿದ್ದ ಕುರಿ ಹಿಂಡಿನ ಮೇಲೆ ಚಿರತೆಯೊಂದು ದಾಳಿ ನಡೆಸಿದ ಪರಿಣಾಮ 27 ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ನಡೆದಿದೆ.
ಹರಿಹರ ತಾಲೂಕು ಹೊಳೆಸಿರಿಗೆರೆ ಕ್ರಾಸ್ ಯಲವಟ್ಟಿ ರಸ್ತೆಯಲ್ಲಿರುವ ಅಡಿಕೆ ತೋಟದಲ್ಲಿ ಬೆಳಗಾವಿ ಜಿಲ್ಲೆ ಸದಲಗ ಗ್ರಾಮದ ಸೋಮಣ್ಣ ಎಂಬುವರಿಗೆ ಸೇರಿದ ಕುರಿ ಹಿಂಡು ಬೀಡುಬಿಟ್ಟಿತ್ತು. ಮಂಗಳವಾರ ತಡರಾತ್ರಿ ಕುರಿ ಹಿಂಡಿನ ಮೇಲೆ ಏಕಾಏಕಿ ಚಿರತೆ ದಾಳಿ ನಡೆಸಿದೆ. ಕುರಿಗಾಹಿಗಳು ಕೂಗಿಗೊಂಡು ಗದ್ದಲ ಎಬ್ಬಿಸಿದ್ದರಿಂದ ಚಿರತೆ ಓಡಿಹೋಗಿದೆ. ಕುರಿಗಳು ಎಲ್ಲೆಂದರಲ್ಲಿ ಸತ್ತು ಬಿದ್ದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿರತೆ ಕಾಣಿಸಿಕೊಂಡಿರುವುದರಿಂದ ಈ ಭಾಗದ ಜನರು ಆತಂಕಗೊಂಡಿದ್ದು, ಶೀಘ್ರವೇ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಸುತ್ತಮುತ್ತಲಿನ ಗ್ರಾಮಸ್ಥರು ಇಲಾಖೆಗೆ ಆಗ್ರಹಿಸಿದ್ದಾರೆ.