ಹೊಸ ದಿಗಂತ ವರದಿ, ಮಂಡ್ಯ :
ತಾಲೂಕಿನ ಕನ್ನಲಿ ಗ್ರಾಮದಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದ್ದು, ಇದರಿಂದ ಗ್ರಾಮಸ್ಥರ ಆತಂಕ ದೂರವಾದಂತಾಗಿದೆ.
ಕಳೆದ ಹಲವು ದಿನಗಳಿಂದಲೂ ಚಿರತೆ ಭಯ ಗ್ರಾಮಸ್ಥರನ್ನು ಕಾಡುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಗ್ರಾಮಸ್ಥರ ದೂರಿನ ಮೇರೆಗೆ ಅಧಿಕಾರಿಗಳು ಗ್ರಾಮದ ಸುತ್ತಮುತ್ತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೂ ಚಿರತೆ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಗ್ರಾಮದ ಹೊರ ವಲಯದಲ್ಲಿರುವ ಶ್ರೀನಿವಾಸ್ ಅವರ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಅದನ್ನು ರಕ್ಷಣೆ ಮಾಡಿ ಅರಣ್ಯ ಇಲಾಖಾಧಿಕಾರಿಗಳ ವಶಕ್ಕೆ ಒಪ್ಪಿಸಿದ್ದರು. ಎರಡು ಚಿರತೆ ಮರಿಗಳನ್ನು ತಾಯಿ ಚಿರತೆ ಎತ್ತಿಕೊಂಡು ಹೋಗಿತ್ತು. ಈ ಹಿನ್ನೆಲೆಯಲ್ಲಿ ಕಬ್ಬಿನ ಗದ್ದೆಯ ಸುತ್ತಮುತ್ತ ಹುಡುಕಾಟ ನಡೆಸಿದ್ದರು. ಆದರೆ ಇತರೆ ಮರಿಗಳಾಗಲೀ, ತಾಯಿ ಚಿರತೆಯಾಗಲೀ ಪತ್ತೆಯಾಗಿರಲಿಲ್ಲ.
ಸ್ಥಳಕ್ಕೆ ಧಾವಿಸಿದ ಮೇಲುಕೋಟೆ ವ್ಯಾಪ್ತಿಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಚಿರತೆ ಮರಿಯನ್ನಿಟ್ಟುಕೊಂಡು ತಾಯಿ ಚಿರತೆಯನ್ನು ಸೆರೆ ಹಿಡಿಯಲು ಬೋನು ಇಟ್ಟಿದ್ದರು. ಇಂದು ಮುಂಜಾನೆ ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ಕಳೆದ ಹಲವು ದಿನಗಳಿಂದಲೂ ಗರ್ಭಿಣಿಯಾಗಿದ್ದ ಚಿರತೆ ಈ ಭಾಗದಲ್ಲಿ ಓಡಾಡುತ್ತಿದ್ದುದನ್ನು ಗ್ರಾಮಸ್ಥರು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಗರ್ಭಿಣಿಯಾಗಿರುವ ಕಾರಣ ಅದು ಮರಿಗಳಿಗೆ ಜನ್ಮ ನೀಡಲು ಸೂಕ್ತ ಸ್ಥಳಾವಕಾಶದ ಹುಡುಕಾಟದಲ್ಲಿತ್ತು.
ಆ ಕಾರಣಕ್ಕೆ ಕಬ್ಬಿನ ಗದ್ದೆ ಸೇರಿದಂತೆ ಇತರೆ ಕಡೆಗಳಲ್ಲಿ ಸುತ್ತಾಡುತ್ತಿತ್ತು ಎಂದು ವಲಯ ಅರಣ್ಯಾಧಿಕಾರಿ ಚೈತ್ರಾ ತಿಳಿಸಿದ್ದಾರೆ.