ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇವಲ ಮೂರು ದಿನಗಳಲ್ಲಿ ಎರಡು ಚಿರತೆಗಳು ಜನವಸತಿ ಪ್ರದೇಶಗಳಲ್ಲಿ ತಿರುಗಾಡುತ್ತಿರುವ ದೃಶ್ಯಗಳು ಮಹಾರಾಷ್ಟ್ರದ ನಾಸಿಕ್ ಪ್ರದೇಶದಲ್ಲಿ ಕಂಡುಬಂದಿದೆ. ನಾಸಿಕ್ ನಗರದ ಮನೆಯೊಂದರ ಮೊದಲ ಮಹಡಿಯ ಬೆಡ್ ರೂಂನಲ್ಲಿ ಚಿರತೆ ಅಡಗಿರುವುದನ್ನು ಅರಣ್ಯಾಧಿಕಾರಿಗಳು ಪತ್ತೆ ಮಾಡಿ, ರಕ್ಷಿಸಿದ್ದಾರೆ.
ಮನೆಯ ಬಾಗಿಲು ತೆರೆದಿದ್ದರಿಂದ ಚಿರತೆ ಮಲಗುವ ಕೋಣೆಗೆ ನುಗ್ಗಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಜನವಸತಿ ಪ್ರದೇಶಗಳಲ್ಲಿ ಚಿರತೆಗಳು ಕಾಣಿಸಿಕೊಂಡ ಅನೇಕ ಘಟನೆಗಳಿವೆ. ಮಹಾರಾಷ್ಟ್ರದ ಕಲ್ಯಾಣ್-ಮುರ್ಬಾದ್ ರಸ್ತೆಯ ವರಪ್ ಗ್ರಾಮದ ಬಳಿಯ ಟಾಟಾ ಪವರ್ ಕಂಪನಿ ಆವರಣದಲ್ಲಿ ಬುಧವಾರ ಚಿರತೆಯೊಂದು ಓಡಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಹಾರಾಷ್ಟ್ರದ ಟಾಟಾ ಪವರ್ ಕಾಂಪ್ಲೆಕ್ಸ್‌ಗೆ ಚಿರತೆಯೊಂದು ನುಗ್ಗಿದ್ದು, ಕಂಪನಿಯ ಉದ್ಯೋಗಿಗಳು ಚಿರತೆಯ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ರಾತ್ರಿ ಹುಡುಕಾಟ ನಡೆಸುವಷ್ಟರಲ್ಲಿ ಚಿರತೆ ಸ್ಥಳದಿಂದ ಬೇರೆಡೆಗೆ ತೆರಳಿರುವುದು ಕಂಡು ಬಂದಿದೆ.
ಅರಣ್ಯ ಗ್ರಾಮಗಳಲ್ಲಿನ ಜನರಲ್ಲಿ ಭೀತಿ
ವರಪ ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆಗಳ ಓಡಾಟದ ಬಗ್ಗೆ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಬ್ಯಾನರ್‌ಗಳನ್ನು ಹಾಕಿದೆ. ಅರಣ್ಯ ಇಲಾಖೆ ವಿಶೇಷ ಅಧಿಕಾರಿಗಳ ತಂಡವನ್ನು ನೇಮಿಸಿ ನಿಗಾ ವಹಿಸಿದೆ. ಇತ್ತೀಚೆಗೆ ಜನವಸತಿ ಪ್ರದೇಶಗಳಲ್ಲಿ ಚಿರತೆಗಳು ಹೆಚ್ಚಾಗಿ ಓಡಾಡುತ್ತಿರುವುದರಿಂದ ಅರಣ್ಯ ಗ್ರಾಮಗಳ ಜನರು ತೀವ್ರ ಭಯ ವ್ಯಕ್ತಪಡಿಸಿದ್ದಾರೆ.