ಹೊಸದಿಗಂತ ವರದಿ ಮಡಿಕೇರಿ:
ತಂತಿ ಬೇಲಿಯಲ್ಲಿ ಸಿಲುಕಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ನಾಗರಹೊಳೆ ರಕ್ಷಿತಾರಣ್ಯಕ್ಕೆ ಸ್ಥಳಾಂತರಿಸಿದ ಘಟನೆ ವೀರಾಜಪೇಟೆ ಸಮೀಪದ ಕೆದಮಳ್ಳೂರು ಗ್ರಾಮದಲ್ಲಿ ನಡೆದಿದೆ.
ಕೆದಮುಳ್ಳೂರು ಗ್ರಾಮದ ಮಾಳೇಟಿರ ಗೌತಮ್ ಎಂಬವರ ಕಾಫಿ ತೋಟದಲ್ಲಿ ಚಿರತೆಯೊಂದು ತಂತಿ ಬೇಲಿಯಲ್ಲಿ ಸಿಲುಕಿಕೊಂಡು, ಪ್ರಾಣ ರಕ್ಷಣೆಗಾಗಿ ಹರಸಾಹಸ ಪಡುತ್ತಿತ್ತು. ವಿಷಯ ತಿಳಿದ ತೋಟ ಮಾಲಕರು ಈ ಕುರಿತು ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರಿಗೆ ಮಾಹಿತಿ ನೀಡಿದರು.
ಕೂಡಲೇ ಕಾರ್ಯಪ್ರವೃತ್ತರಾದ ಸಂಕೇತ್ ಪೂವಯ್ಯ ಅವರುಪ ಶುವೈದ್ಯ ರಮೇಶ್, ಎಸಿಎಫ್ ಗೋಪಾಲ್, ಆರ್ ಎಫ್ಒ ಶಿವರಾಮ್ ಅರವಳಿಕೆ ತಜ್ಞ ರಂಜನ್ ಮತ್ತು ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿ, ಅರವಳಿಕೆ ನೀಡಿ ಚಿರತೆ ರಕ್ಷಿಸುವುದರೊಂದಿಗೆ, ಪ್ರಥಮ ಚಿಕಿತ್ಸೆ ನೀಡಿ ನಾಗರಹೊಳೆ ಅರಣ್ಯಕ್ಕೆ ಸ್ಥಳಾಂತರಿಸಿದರು.