ಹೊಸದಿಗಂತ ವರದಿ, ಅಂಕೋಲಾ:
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ವಿಚಾರಣೆಗೊಳಡಿಸುವಂತೆ ರಾಜ್ಯದ ರಾಜ್ಯಪಾಲರು ಅನುಮತಿ ನೀಡಿರುವುದರಿಂದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದರು.
ಪಟ್ಟಣದಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮುಡಾ ಹಗರಣದಲ್ಲಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರ ಪಾತ್ರದ ಕುರಿತು ರಾಜ್ಯದ ಮನೆಗಳಿಗೆ ತಿಳಿದಿದೆ ಅವರುಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿದರೆ ವಿಚಾರಣೆ ಸಂದರ್ಭದಲ್ಲಿ ತನಿಖೆಗೆ ಅಡ್ಡಿಯಾಗುತ್ತದೆ,ತನಿಖೆಯ ಮೇಲೆ ಆಡಳಿತದ ಒತ್ತಡ ಉಂಟಾಗಲು ಕಾರಣವಾಗಲಿದೆ ಆದ್ದರಿಂದ ಸಿದ್ಧರಾಮಯ್ಯ ಅವರು ರಾಜೀನಾಮೆ ನೀಡಲಿ ಜೊತೆಗೆ ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಹ ಅವರು ಮುಖ್ಯ ಮಂತ್ರಿ ಸ್ಥಾನದಲ್ಲಿ ಮುಂದುವರಿಯಬಾರದು ಎಂದು ಹೇಳಿದರು.
ಸಂವಿಧಾನ ಬದ್ಧವಾದ ಅತ್ಯಂತ ಶ್ರೇಷ್ಠ ಹುದ್ದೆಯಲ್ಲಿರುವ ರಾಜ್ಯಪಾಲರು ತೆಗೆದುಕೊಂಡ ನಿರ್ಣಯವನ್ನು ರಾಜಕೀಯ ದೃಷ್ಟಿಕೋನದಿಂದ ವಿಶ್ಲೇಷಿಸಿರುವುದು ಅತ್ಯಂತ ಕೆಟ್ಟ ಸಂಪ್ರದಾಯ ಎಂದ ಅವರು ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಮ್ಮ ರಾಜ್ಯ ಭ್ರಷ್ಟ ರಾಜ್ಯವಾಗಿ ಗುರುತಿಸಿಕೊಳ್ಳುವಂತಾಗಿದ್ದು ದುರಂತ ಎಂದ ಅವರು ಸಿದ್ಧರಾಮಯ್ಯ ಅವರು ರಾಜೀನಾಮೆ ಕೊಟ್ಟು ವ್ಯವಸ್ಥೆಗೆ ಗೌರವ ನೀಡಬೇಕು ಎಂದು ಹೇಳಿದರು.
ಪ್ರಮುಖರುಗಳಾದ ಭಾಸ್ಕರ ನಾರ್ವೇಕರ್, ಸಾಯಿಕಿರಣ ಶೇಟಿಯಾ ನಾಗರಾಜ ನಾಯಕ, ಗೋಪಾಲಕೃಷ್ಣ ವೈದ್ಯ ಇದ್ದರು.