ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಸಂಸ್ಕೃತಿ, ಪರಂಪರೆ, ಸಂಪ್ರದಾಯ ಉಳಿಸುವಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಾತ್ರ ಹಾಗೂ ಕೊಡುಗೆ ಬಹಳ ಅನನ್ಯವಾಗಿದೆ ಎಂದು ಖ್ಯಾತ ಸಂಗೀತ ಕಲಾವಿದ ಶಂಕರ ಮಹಾದೇವನ್ ಹೇಳಿದರು.
ಮಹಾರಾಷ್ಟ್ರ ನಾಗಪುರದ ರೇಶಿಂಭಾಗನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ನಡೆದ ವಿಜಯದಶಮಿ ಉತ್ಸವದಲ್ಲಿ ಮಾತನಾಡಿದ ಅವರು…ʻನಮ್ಮ ವೈಭವಶಾಲಿ ಭಾರತದಲ್ಲಿ ಸಂಗೀತ ಕ್ಷೇತ್ರದ ಜ್ಞಾನ ಒಂದು ನಿಧಿಯಂತಿದೆ. ಇದು ಬೇರೆ ಯಾವ ದೇಶದಲ್ಲೂ ಕಾಣಸಿಗದು. ನಮ್ಮ ನಾಟ್ಯಶಾಸ್ತ್ರ, ವೇದ-ಉಪನಿಷತ್‌ಗಳು, ವಿಶ್ವ ಶಾಂತಿ ಮಂತ್ರ, ಎಲ್ಲರ ಸುಖಕ್ಕಾಗಿ ಪ್ರಾರ್ಥಿಸುವುದು ಇದು ಭಾರತದ ವೈಶಿಷ್ಟ್ಯತೆ. ಈ ವಿಶೇಷತೆಗಳನ್ನು ಮುಂದಿನ ಪೀಳಿಗೆಯವರಿಗೆ ಅರಿವು ಮೂಡಿಸಬೇಕುʼ ಎಂದರು.
ಯಾವುದೇ ವೃತ್ತಿಯ ಒಬ್ಬ ವ್ಯಕ್ತಿ ತನ್ನ ಕೆಲಸಗಳ ಮೂಲಕ ದೇಶದ ಕುರಿತು ಒಂದಿಷ್ಟು ಜವಾಬ್ದಾರಿ, ಗೌರವ, ಬದ್ಧತೆ, ಪ್ರೀತಿ ಹೊಂದಬೇಕು. ವ್ಯಕ್ತಿಯ ಇಚ್ಛಾನುಸಾರದ ಕ್ಷೇತ್ರದಲ್ಲಿ ಪರಿಣಿತಿ ಹೊಂದಿ, ಬದಲಾವಣೆ ತರಬೇಕು ಹಾಗೂ ಮುಂದಿನ ಪೀಳಿಗೆಯನ್ನು ಪ್ರೇರೆಪಿಸಬೇಕು. ನನ್ನ ಎಲ್ಲ ಕಾರ್ಯಕ್ರಮಗಳಲ್ಲಿ ಮನೋರಂಜನೆಗಾಗಿ ಬರುವ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿಯ ವ್ಯಾಪ್ತಿ, ಅಗಾಧತೆ ಕುರಿತು ಪರಿಚಯಿಸುವ ಕೆಲಸ ಮಾಡುತ್ತಿದ್ದೇನೆ. ಸಂಗೀತ ಸಂಯೋಜಿಸುವಾಗಲೂ ಕೂಡ ನಮ್ಮ ಶಾಸ್ತ್ರೀಯತೆಯ ಅಂಶಗಳನ್ನು ಅಳವಡಿಸಿರುತ್ತೇನೆ. ಚಲನಚಿತ್ರ ಅಥವಾ ಶಾಸ್ತ್ರೀಯವೇ ಆಗಿರಲಿ ಸಂಗೀತ ಮಾಧ್ಯಮ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯ ಶ್ರೇಷ್ಠತೆ ಮುಂದಿನ ಪೀಳಿಗೆಗೆ ಪರಿಚಯಿಸುವುದು ನನ್ನ ಕರ್ತವ್ಯವಾಗಿದೆ ಎಂದರು.
ವಿಶ್ವದ ಎಲ್ಲ ಸಂಗೀತಗಾರರೊಂದಿಗೆ ಪ್ರದರ್ಶನ ನೀಡಿದ ಅನುಭವದಿಂದ ಹೇಳುವುದಾದರೆ ನಮ್ಮ ದೇಶದ ಸಂಗೀತ ಹಾಗೂ ಅದರ ಪರಂಪರೆ ಅತ್ಯಂತ ಶ್ರೇಷ್ಠ ಹಾಗೂ ಉನ್ನತವಾಗಿದೆ. ಹೇಗೆ ಸಂಗೀತದ ಎಲ್ಲ ಗೀತೆಗಳ ಹಿಂದೆ ಸ.ರಿ.ಗ.ಮ. ಇರುತ್ತದೆಯೋ ಹಾಗೇಯೆ ದೇಶದ ಎಲ್ಲ ಕಠಿಣ ಪರಿಸ್ಥಿತಿ ಹಾಗೂ ವಿಕಾಸದ ಹಿಂದೆ ಸಂಘದ ಸ್ವಯಂಸೇವಕರು ಸರಿಗಮ ಗಳ ಹಾಗೆ ಇರುತ್ತಾರೆ. ಪ್ರಸ್ತುತ ಇಡೀ ವಿಶ್ವ ಭಾರತೀಯರನ್ನು ಗೌರವದಿಂದ ನೋಡುತ್ತಿದೆ. ಭಾರತೀಯ ನಾಗರಿಕರಾಗಿರುವುದಕ್ಕೆ ನಾವು ಅತ್ಯಂತ ಹೆಮ್ಮೆ ಪಡುವ ಕ್ಷಣವಿದು ಎಂದು ಹೇಳಿದರು.