ಕುಮಾರಣ್ಣ ಯಾವ ತಿಮಿಂಗಿಲವನ್ನಾದರೂ ಹಿಡಿಯಲಿ, ನುಂಗಿಕೊಳ್ಳಲಿ: ಡಿ.ಕೆ. ಶಿವಕುಮಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಕೀಯ ನಾಯಕರ ನಡುವೆ ಮಾತಿನಚಕಮಕಿ ಜೋರಾಗಿದ್ದು, ಇದರ ಹಿಂದೆ ದೊಡ್ಡ ತಿಮಿಂಗಿಲವೇ ಇದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಡಿಕೆಶಿ ವಿರುದ್ಧ ಪರೋಕ್ಷ ಚಾಟಿ ಬೀಸಿದ್ದರು. ಇದಕ್ಕೆ ಈಗ ತಿರುಗೇಟು ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar), ಪೆನ್ ಡ್ರೈವ್ ವಿಚಾರದಲ್ಲಿ ಕುಮಾರಣ್ಣ ಯಾವ ತಿಮಿಂಗಿಲವನ್ನಾದರೂ ಹಿಡಿಯಲಿ, ಹಿಡಿದು, ಬಡಿದು ಅವರೇ ನುಂಗಿಕೊಳ್ಳಲಿ ಎಂದು ಹೇಳಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಅವರಿಗೆ ಯಾರನ್ನು ಹಿಡಿದು ಬಡಿದು ಒಳಗೆ ಹಾಕಬೇಕು ಅನ್ನಿಸುತ್ತದೋ ಅವರನ್ನು ಒಳಗೆ ಹಾಕಿಸಲಿ. ತಿಮಿಂಗಿಲಗಳನ್ನು ಅವರೇ ನುಂಗಿಕೊಳ್ಳಲಿ. ನಾನು ನಿರ್ದೇಶಕನೂ ಅಲ್ಲ, ನಿರ್ಮಾಪಕನೂ ಅಲ್ಲ. ನಾನು ಕೇವಲ ಪ್ರದರ್ಶಕ ಅಷ್ಟೇ ಎಂದು ಮಾರ್ಮಿಕವಾಗಿ ಹೇಳಿದರು.

ಶಾಸಕರು, ಸಚಿವರಿಂದ ಮಾತನಾಡಿಸುತ್ತಿರುವವರು ಯಾರು ಎಂದು ಎಚ್‌.ಡಿ. ಕುಮಾರಸ್ವಾಮಿ ಅವರ ಪರೋಕ್ಷ ಆರೋಪದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಬೇರೆಯವರಿಂದ ಮಾತನಾಡಿಸುವ, ಪ್ರತಿಭಟನೆ ಮಾಡಿಸುವ, ಬೇರೆಯವರ ಮೇಲೆ ಅನಗತ್ಯ ಆರೋಪ ಮಾಡುವ ಅಗತ್ಯ ನನಗಿಲ್ಲ. ನಾನು ಚುನಾವಣಾ ಪ್ರಚಾರದಲ್ಲಿ ನಿರತನಾಗಿದ್ದೇನೆ. ನಾನು ರಾಜಕೀಯ ಪಕ್ಷದ ಅಧ್ಯಕ್ಷ. ಈ ಪ್ರಕರಣದಲ್ಲಿ ಒಂದು ಸಣ್ಣ ಹಸ್ತಕ್ಷೇಪವಿದ್ದರೂ ಅದಕ್ಕೆ ಬೆಲೆ ತೆರಲು ನಾನು ಸಿದ್ಧ. ಈಗ ಆ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಸಮಯ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಹೇಳಿದರು.

ಎಚ್‌.ಡಿ. ರೇವಣ್ಣ ಅವರ ಪರಿಸ್ಥಿತಿ ನೋಡಿ ನನಗೂ ಬೇಸರವಾಗುತ್ತಿದೆ. ಅವರದು ದೊಡ್ಡ ಕುಟುಂಬ, ಈ ರೀತಿ ಆಗಬಾರದು ಎಂದು ಬಯಸುತ್ತೇನೆ. ಅವರು ನನಗೆ ಏನಾದರೂ ಬಯಸಲಿ. ಆದರೆ, ನಾನು ಮಾತ್ರ ಅವರಿಗೆ ಕೆಟ್ಟದ್ದು ಬಯಸುವುದಿಲ್ಲ. ನಾನು ಪ್ರಕೃತಿ ನಿಯಮ, ನ್ಯಾಯದ ಮೇಲೆ ನಂಬಿಕೆ ಇಟ್ಟವನು. ನಾನು ರಾಜಕೀಯ ಷಡ್ಯಂತ್ರಕ್ಕೆ ಗುರಿ ಆಗಿದ್ದವನೇ. ಜತೆಗೆ ಅದರ ನೋವು ಅನುಭವಿಸಿದವನೇ. ಆ ವೇಳೆಯಲ್ಲಿ ನಾನು ಎಷ್ಟು ಗಟ್ಟಿಯಾಗಿ, ಧೈರ್ಯವಾಗಿ, ಆತ್ಮವಿಶ್ವಾಸದಿಂದ ಇದ್ದೆ ಎಂಬುದು ನನಗೆ ಮಾತ್ರ ಗೊತ್ತಿದೆ. ದೇವರು ನನಗೆ ಎಲ್ಲ ರೀತಿಯ ರಕ್ಷಣೆ ನೀಡಿದ್ದು, ನಾನು ಬೇರೆಯವರಿಗೆ ಕೆಟ್ಟದು ಬಯಸುವುದಿಲ್ಲ. ಆದರೆ, ನನ್ನ ಬ್ರದರ್ ಕುಮಾರಣ್ಣನಿಗೆ ವಿಧಾನಸಭೆಯಲ್ಲಿ ಉತ್ತರ ನೀಡುತ್ತೇನೆ ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!