ಹೊಸದಿಗಂತ ವರದಿ, ಮಂಗಳೂರು:
ಮುಂದಿನ ಲೋಕಸಭಾ ಚುನಾವಣೆಯನ್ನು ಬಿಜೆಪಿ ಕಾರ್ಯಕರ್ತರು ಗಂಭೀರವಾಗಿ ತೆಗೆದುಕೊಂಡು ನಮ್ಮ ಪಕ್ಷದ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲು ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ನಗರದ ಸಿ.ವಿ. ನಾಯಕ್ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಜಗತ್ತು ಕೊಂಡಾಡುತ್ತಿದೆ. ಜಿ20 ಸಮಾವೇಶದಲ್ಲಿ ಇದು ಸಾಬೀತಾಗಿದೆ. ಮೋದಿ ಅವರು ಒಂದು ದಿನವೂ ರಜೆ ಮಾಡದೇ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಮೋದಿ ಅವರು ಮುಂದಿನ ಬಾರಿ ಪ್ರಧಾನಿ ಆಗುವುದನ್ನು ತಡೆಯಲು ಐಎನ್‌ಡಿಐಎ ಒಕ್ಕೂಟ ವಿವಿಧ ತಂತ್ರ ಹೂಡಿದ್ದು, ಅದು ಫಲಿಸುವುದಿಲ್ಲ. ಪ್ರಧಾನಿ ಮೋದಿ ಅವರು ಆಗಮಿಸಿದ ಕಾರಣ ಭಾರತ ತಂಡ ವಿಶ್ವಕಪ್ ಕ್ರಿಕೆಟ್ ಸೋತಿತು ಎಂಬ ರಾಹುಲ್ ಗಾಂಧಿ ಹೇಳಿಕೆ ಬಾಲಿಶವಾದುದು. ರಾಹುಕಾಲಕ್ಕೂ ರಾಹುಲ್‌ಗಾಂಧಿಗೂ ವ್ಯತ್ಯಾಸ ಇಲ್ಲ. ರಾಹುಲ್ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ರಾಹುಕಾಲ ಆವರಿಸಿದೆ. ರಾಜ್ಯದ ಕಾಂಗ್ರೆಸ್ ಸರಕಾರವೂ ದರ್ಪದಿಂದ ನಡೆದುಕೊಳ್ಳುತ್ತಿದ್ದು, ಅಕಾರದ ಅಮಲಿನಲ್ಲಿ ತೇಲಾಡುತ್ತಿದೆ ಎಂದು ಟೀಕಿಸಿದರು.
ಬಿಜೆಪಿ ಅಲ್ಪಸಂಖ್ಯಾತರ ವಿರೋಯಲ್ಲ. ಆದರೆ, ದೇಶದ್ರೋಹದ ಕೆಲಸ ಮಾಡುವವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಬಿಜೆಪಿ ಕಾರ್ಯಕರ್ತರ ಹಿತ ಕಾಪಾಡಲು ಪಕ್ಷ ಬದ್ಧವಿದೆ. ರಾಜ್ಯದಲ್ಲಿ ಬಿಜೆಪಿ ಅಂದರೆ ದಕ್ಷಿಣ ಕನ್ನಡ ಎಂಬ ಹೆಸರು ರಾಜ್ಯದಲ್ಲಿದೆ. ಇಲ್ಲಿನ ಸಂಘಟನೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ವಿಜಯೇಂದ್ರ ಹೇಳಿದರು.