ಹೊಸ ದಿಗಂತ ವರದಿ , ವಿಜಯಪುರ:
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ಪ್ರಕರಣ ವಾಪಸ್ಸು ವಿಚಾರದಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.
ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದಿರುವ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಕ್ಯಾಬಿನೆಟ್ ಕೈಗೊಂಡ ನಿರ್ಣಯದ ಬಗ್ಗೆ ಮಧ್ಯ ಪ್ರವೇಶ ಮಾಡುವಂತೆ ಆಗ್ರಹಿಸಿದ್ದಾರೆ. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದೆ. ಈಗಾಗಲೇ ವಿಚಾರಣೆಗೆ ತಡೆ ನೀಡಲು ಕೋರ್ಟ್ ಕೂಡಾ ನಿರಾಕರಿಸಿದೆ.
ಇಷ್ಟಾದರೂ ರಾಜ್ಯ ಸರ್ಕಾರ ತನಿಖೆ ವಾಪಸ್ ಪಡೆಯಬೇಕು ಎಂದು ನಿರ್ಣಯ ಮಾಡಿದೆ.
ಅಡ್ವಕೇಟ್ ಜನರಲ್ ಸಲಹೆ ಆಧರಿಸಿ ಕ್ಯಾಬಿನೆಟ್ ನಲ್ಲಿ ಸರ್ಕಾರ ಈ ಬಗ್ಗೆ ನಿರ್ಧಾರ ಮಾಡಿದೆ. ಹೀಗಾಗಿ ಕೂಡಲೇ ರಾಜ್ಯಪಾಲರು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದು, ಅಲ್ಲದೇ, ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟನೆ ಪಡೆಯುವಂತೆ ಕೇಳಿಕೊಂಡಿದ್ದಾರೆ.