ಭಾರತೀಯ ಚಿಂತೆನಗಳ‌ ಮೇಲೆ ವ್ಯಾಖ್ಯಾನ ರೂಪುಗೊಳ್ಳಲಿ : ಲೇಖಕ ಜಿ.ಬಿ. ಹರೀಶ 

ಹೊಸದಿಗಂತ ವರದಿ ಬೆಂಗಳೂರು:

ಪ್ರಚಲಿತದಲ್ಲಿ ಹಿಂದುತ್ವ, ಭಾರತದ ಬಗ್ಗೆ ಹೆಚ್ಚು ಚರ್ಚೆಗಳಾಗುತ್ತಿವೆ. ಈ ನಿಟ್ಟಿನಲ್ಲಿ ಯುವಪೀಳಿಗೆ ಅಧ್ಯಯನಶೀಲರಾಗಬೇಕು ಎಂದು ಸಂಶೋಧಕ, ಲೇಖಕ ಜಿ.ಬಿ. ಹರೀಶ ಹೇಳಿದರು.

ನಗರದ ಜನಸೇವಾ ವಿದ್ಯಾಕೇಂದ್ರದಲ್ಲಿ 3ನೇ ಯಂಗ್ ಥಿಂಕರ್ಸ್ ಮೀಟ್ ನಲ್ಲಿ ಭಾರತೀಯವಲ ಚಿಂತನೆಗಳ ಕುರಿತು ಅವರು‌ ಮಾತನಾಡಿದರು.

ಜೀವನದ ಪರಮ‌ ಉದ್ದೇಶ ಮೋಕ್ಷ ಅಥವಾ ಸದೈವ ಆನಂದವಾಗಿರುವುದು. ಆನಂದ ಮನುಷ್ಯನ ಮೂಲ ಲಕ್ಷಣ. ಆನಂದವೇ ಸ್ವರೂಪ. ಈ ದಿಶೆಯಲ್ಲಿರುವ ನಮ್ಮೆಲ್ಲ ಚಿಂತನೆಗಳು ಭಾರತಕ್ಕೆ ಪೂರಕವಾಗಿರುತ್ತವೆ. ನಮ್ಮ ಪೂರ್ವಜರು, ಮಹಾಪುರುಷರು ತಮ್ಮ‌ ಕಾರ್ಯಗಳಲ್ಲಿ ಉತ್ಸುಕತೆ, ಅತೀವ ಶ್ರದ್ಧೆ ತೋರುತ್ತಿದ್ದರು.‌ ಅದರಿಂದಲೇ ಮಹತ್ ಸಾಧನೆಗಳು ಸಾಧ್ಯವಾಗುತ್ತಿದ್ದವು. ಶ್ರೇಷ್ಠ ವಿಚಾರಗಳನ್ನು ಭಾರತೀಯರು ಆಚರಣೆಗೆ ತರುತ್ತಿದ್ದಾಗ, ಪಾಶ್ಚಾತ್ಯರ ವಿಚಾರಗಳು ಕೇವಲ ಉಪದೇಶಕ್ಕೆ ಮಾತ್ರ ಸೀಮಿತವಾಗಿದ್ದವು ಎಂದರು.

ಭಾರತೀಯ ಚಿಂತನೆಗಳು ಬಹುತ್ವ ಹಾಗೂ ವೈವಿಧ್ಯಮಯವಾಗಿದೆ. ಎಲ್ಲ ಒಳ್ಳೆಯ ಸಂಗತಿಗಳಿಗೆ ಇಲ್ಲಿ ಅವಕಾಶವಿದೆ. ನಮ್ಮ ಕೌಟುಂಬಿಕ ಪದ್ಧತಿ ಅತ್ಯಂತ ಗಟ್ಟಿಯಾಗಿರುವುದೇ ನಮ್ಮ ಶ್ರೇಷ್ಠತೆ. ಈ ಸಂಬಂಧಗಳ ಗುಣಾಧಾರದ ಮೇಲೆಯೆ‌ ಸಮಾಜವೂ ನಿರ್ಮಾಣವಾಗಿದೆ. ಹಾಗಾಗಿ ನಮ್ಮ ಸಮಾಜ ಎಂದೂ ದುರ್ಬಲವಾಗುವುದಿಲ್ಲ. ಆಧುನಿಕ ಯುಗದಲ್ಲಿ ನಗರ ಪ್ರದೇಶಗಳಲ್ಲಿ ಸಂಬಂಧ, ಕುಟುಂಬದ‌ ಮಹತ್ವ ಹೆಚ್ಚಾಗಿ ಅರಿಯಬೇಕಾಗಿದೆ ಎಂದರು.

ಸಮಾಜವಾದದ ಅತೀಯಾದ ಪ್ರಭಾವದಿಂದ ಸಮಾನತೆ ಪ್ರಚಲಿತವಾಗುತ್ತಿದೆ.‌ ಸಮಾನತೆ ಎಲ್ಲ ಕ್ಷೇತ್ರ, ಆಯಾಮ, ಕಾರ್ಯಗಳಲ್ಲಿ ಅನ್ವಯವಾಗುವುದಿಲ್ಲ. ಆದರೆ ಸಮಾನ ಹಕ್ಕುಗಳು ಎಲ್ಲರಿಗೂ ಅವಶ್ಯಕ.‌ ನೀತಿ ರೂಪಿಸುವಲ್ಲಿ ಸಮಾನತೆ ಇರಬೇಕು. ಭಾರತೀಯ ಚಿಂತನೆಯಲ್ಲಿ ಸಮಾನತೆ ಮೊದಲಿನಿಂದಲೂ ಇದೆ. ಪಾಶ್ಚಾತ್ಯರ ಪ್ರಕಾರ ಮನುಷ್ಯ ಆರ್ಥಿಕ ಪ್ರಾಣಿ ಎಂಬ ವಿಚಾರ ಭಾರತೀಯರು ಒಪ್ಪುವುದಿಲ್ಲ‌ ಎಂದರು.

ಕುಂಕುಮ ಇಡುವುದು, ದೇವರ ನಂಬಿಕೆ‌, ಹಬ್ಬಗಳ ಆಚರಣೆ ಹಿಂದುತ್ವ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಇವೆಲ್ಲ ನಮ್ಮ ಸಾಂಕೇತಿಕ ಪ್ರತಿನಿಧಿತ್ವ. ಇದರಾಚೆಗೂ ಆಳವಾದ ಜ್ಞಾನ ನಿಧಿ ಹಿಂದುತ್ವದಲ್ಲಿದೆ. ಈ ಜ್ಞಾನದ ಪ್ರಸರಣಕ್ಕೆ ಮಾರ್ಗದರ್ಶಕರು ಕಡಿಮೆಯಾಗಿದ್ದಾರೆ. ರಾಮಾಯಣ-ಮಹಾಭಾರತ, ಪುರಾಣ ಇತ್ಯಾದಿ ಕಥೆಗಳೆಲ್ಲ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆ‌ ನಿರಂತರವಾಗಿರಬೇಕು ಎಂದರು.

ಗ್ರಂಥಗಳು, ನಾಟಕ, ಸಿನೆಮಾಗಳಿಗೆ ನಮ್ಮ ಚಿಂತನೆಯ ಆಧಾರದ ಮೇಲೆ ವ್ಯಾಖ್ಯಾನ ರಚಿಸಬೇಕು. ಪ್ರಸ್ತುತ ಎಡಪಂಥೀಯ ವಿಚಾರವಾದಿಗಳು ವಿಶ್ವಮಟ್ಟದಲ್ಲಿ ಭಾರತದ ಕುರಿತು ನಕಾರಾತ್ಮಕ ವ್ಯಾಖ್ಯಾನ ಪಸರಿಸುತ್ತಿದ್ದಾರೆ. ಹಾಗಾಗಿ ನಾವು ವೈಚಾರಿಕವಾಗಿ ಇನ್ನಷ್ಟು ಬಲಶಾಲಿಗಳಾಗಬೇಕು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!