ಹೊಸ ದಿಗಂತ ವರದಿ, ಕಲಬುರಗಿ:
ದೇಶದ ಯುವ ಪೀಳಿಗೆಯೂ ನಮ್ಮ ಖುಷಿ ಮುನಿಗಳು ತಿಳಿಸಿರುವಂತಹ ಭಾರತೀಯ ಸಂಸ್ಕೃತಿಯ ಬೇರುಗಳನ್ನು ಅರಿಯುವಂತಾಗಬೇಕು ಎಂದು ದಿ ಕಾಶ್ಮೀರ ಫೈಲ್ಸ್ ಸಿನೆಮಾ ನಟಿ ಹಾಗೂ ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ಸದಸ್ಯೆ ಭಾಷಾ ಸುಂಬಲಿ ತಿಳಿಸಿದರು.
ಜಿಲ್ಲೆಯ ಸೇಡಮ್ ತಾಲೂಕಿನ ಬೀರನಳ್ಳಿಯ ಪ್ರಕೃತಿ ನಗರದಲ್ಲಿ ಕೊತ್ತಲ ಸ್ವರ್ಣ ಜಯಂತಿ ಹಾಗೂ ೭ನೇ ಭಾರತೀಯ ಸಂಸ್ಕೃತಿ ಉತ್ಸವದ ಪ್ರಕೃತಿ ಮತ್ತು ನಾವು ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಭಾರತೀಯರ ಡಿಎನ್ಎ ನಲ್ಲಿಯೇ ಆಧ್ಯಾತ್ಮಿಕ ಚಿಂತನೆಯಿಂದ ಕೂಡಿದೆ. ನಮ್ಮ ನದಿಗಳು ನಮಗೆ ಪವಿತ್ರವಾದ ಅನುಭೂತಿ ನೀಡುತ್ತವೆ.ಶಾಂತಿ ಮಂತ್ರಗಳಿಂದ ಕೂಡಿರುವ ಭಾರತವು, ಪ್ರಕೃತಿಯ ಪಂಚ ತತ್ವಗಳನ್ನು ಪಾಲನೆ ಮಾಡಿಕೊಂಡು ಬಂದಿದೆ ಎಂದು ಹೇಳಿದರು.
ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ಬಳಸಿಕೊಂಡು ಹಾನಿಯುಂಟು ಮಾಡುತ್ತಿರುವುದು ಅತಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಸರ್ವೇ ಜನಾ ಸುಖಿನೋ ಭವಂತು ಎಂಬ ಮಂತ್ರದೊಂದಿಗೆ ಭಾರತ ನಡೆದುಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ನಾವು ಸಹ ಅದನ್ನೇ ಪಾಲನೆ ಮಾಡಿಕೊಂಡು, ಪ್ರಕೃತಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.
ಪ್ರಕೃತಿಯ ನೆಲ,ಜಲ ಗಾಳಿ, ಪಶು,ಪಕ್ಷಿ ಇವುಗಳ ಪೋಷಣೆ ಮತ್ತು ಸಂರಕ್ಷಣೆ ಅಗತ್ಯ. ಅದೇ ಸುಸಂಸ್ಕೃತ ರಾಷ್ಟ್ರದ ಜವಾಬ್ದಾರಿ ಹಾಗೂ ನಮ್ಮ ಬದುಕಿನ ಮಂತ್ರವಾಗಿದೆ. ಮಾನವರಿಲ್ಲದ ಪ್ರಕೃತಿ ಇರಬಲ್ಲದು.ಆದರೆ, ಪ್ರಕೃತಿಯಿಲ್ಲದ ಮಾನವ ಇರಲಾರ. ಮಾನವೀಯತೆ ಮತ್ತು ಪ್ರಾಕೃತಿಕ ಜಗತ್ತಿನ ನಡುವೆ ಇರುವ ನಿಕಟ ಸಂಬಂಧಕ್ಕೆ ಇಂಬು ನೀಡುವುದೇ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದರು.