ಹೊಸದಿಗಂತ ವರದಿ, ಚಿತ್ರದುರ್ಗ
ಭಾರತದ ಎಲ್ಲ ನಿಘಂಟುಗಳಿಂದ ಶೂದ್ರ ಪದನ್ನು ತೆಗೆದುಹಾಕಬೇಕು. ಶೂದ್ರ ಹೋಗಿ ಶುದ್ಧವಾಗಬೇಕು. ಇವತ್ತಿನಿಂದ ನಾವು ಶುದ್ಧ ಆಗೋಣ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ಮಾನವ ಬಂಧುತ್ವ ವೇದಿಕೆ ವತಿಯಿಂದ ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ನಡೆದ ರಾಜ್ಯ ಬಂಧುತ್ವ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತಾಡಿದ ಅವರು, ದೇಶದಲ್ಲಿ ನಾವು ಶುದ್ಧರು. ನಾವು ಶುದ್ಧರೆ ಆಗಿದ್ದೇವೆ. ಇದನ್ನು ನಿಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಿ. ಪ್ರತಿ ಕೇಂದ್ರದಲ್ಲೂ ಶುದ್ಧತ್ವ ಬೇಕು ಎಂದರು.
ಸಂವಿಧಾನ ಬಂತು ಯುದ್ಧ ನಿಂತಿತು. ಬೇಡರು ಸೇರಿದಂತೆ ಶೇಕಡಾ ೭೪ರಷ್ಟು ಜನ ಅಕ್ಷರ ಕಲಿತರು. ಸಂವಿಧಾನ ಯುದ್ಧ ಮಾಡುವುದನ್ನು ನಿಲ್ಲಿಸಿದೆ. ಯುದ್ಧವೆಂದರೇನು ಎಂದು ನಿಮ್ಮ ವಂಶಪಾರಂಪರ್ಯವಾಗಿ ಗೊತ್ತಿದೆ. ಯುದ್ಧದಲ್ಲಿ ನಾವು ಯಾವತ್ತೂ ಸೋತಿಲ್ಲ. ನಿಮ್ಮೆಲ್ಲರ ಮುಂದೆ ಮಾತಾಡಲು ನನಗೆ ಸಂತೋಷವಾಗಿದೆ. ನಾನು ನಿಂತಿರುವುದು ತರಾಸು ರಂಗ ಮಂದಿರದಲ್ಲಿ. ರಂಗಭೂಮಿಯ ಮೇಲೆ ಕಲಾವಿದ ಸಾಯುತ್ತಾನೆಯೇ ಹೊರತು ಸುಳ್ಳು ಹೇಳಲ್ಲ ಎಂದು ಹೇಳಿದರು.
ಚಿತ್ರದುರ್ಗ ನನ್ನ ಡಾರ್ಜಿಲಿಂಗ್. ನಾನು ಪ್ರೇಮಿಸುತ್ತಿದ್ದ ಸಮಯದಲ್ಲಿ ಬಸ್ ಚಾರ್ಜ್ ಇತ್ಯಾದಿಗೆ ಸೂಕ್ತವಾಗುತ್ತಿದ್ದು ಚಿತ್ರದುರ್ಗ ನಗರ ಮತ್ತು ಬೆಟ್ಟ. ಗೋಪಾಲ್ ಎನ್ನುವವರು ಪ್ರೋಗ್ರಾಮ್ ಎಂದರೆ ಪರಿಕರಗಳನ್ನು ಕೊಂಡೊಯ್ದು ಸಂಜೆ ವಾಪಸ್ ಬರುತ್ತಿದ್ದೆವು. ನಮ್ಮ ಪ್ರೇಮದ ಘಟನೆಗಳು ಇಲ್ಲಿಯೇ ನಡೆದಿವೆ ಎಂದು ಹಳೆಯ ಘಟನೆಗಳನ್ನು ನೆನಪು ಮಾಡಿಕೊಂಡರು.
ನಾನು ಕಂಡ ಮೇರುನಟ ರಾಜ್‌ಕುಮಾರ್. ಅವರು ರಾಜಕೀಯಕ್ಕೆ ಬರದೆ ಕನ್ನಡ ನುಡಿಯನಾಡಿಯಾಗಿ ಬಂದರು. ಅವರು ಚಿತ್ರರಂಗಕ್ಕೆ ಪ್ರವೇಶಿಸಿದ್ದು ಚಿತ್ರದುರ್ಗದಿಂದ. ಹಂಸಲೇಖ ವಿವೇಕ ವೇದಿಕೆಯನ್ನು ಕಟ್ಟಿದ್ದು ಚಳ್ಳಕೆರೆಯಲ್ಲಿ, ಯಶಸ್ಸು ಗಳಿಸಿದ್ದು ಚಿತ್ರದುರ್ಗದಲ್ಲಿ ಎಂದ ಅವರು, ಇಂದು ಯಾವ ಭಾರತೀಯನೂ ಏಕಾಂಗಿಯಲ್ಲ, ಎಲ್ಲರೂ ಸಾಲಗಾರರು. ಶಸ್ತ್ರಾಸ್ತ್ರಗಳ ಸಾಲದ ಭಾರ ಭಾರತೀಯರ ಮೇಲಿದೆ. ಇಂತಹ ವಿಷಯಗಳನ್ನು ಗಣ್ಯರು ಹೇಳಿದ್ದಾರೆ. ನಾನು ಸಂಗೀತಗಾರ, ಸಾಹಿತಿಯಾಗಿ, ನಿಮ್ಮ ಕರುವಾಗಿ ಬಂದಿದ್ದೇನೆ ಎಂದರು.
ನಾಡು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಉಪಾಯಗಳನ್ನು ಕಂಡುಹಿಡಿಯಲು ಇದೊಂದು ಅವಕಾಶ. ನಮ್ಮನ್ನು ಯುದ್ಧಕ್ಕೆ ಕೆಣಕಿ ಅವರು ಬಲಿಹಾಕಲು ಯತ್ನಿಸುತ್ತಿಸಿದ್ದಾರೆ. ಸದೃಢವಾಗಿರುವ ಎಂದೂ ಸೋಲದ ಯೋಧರಿಗೆ ವಿಷಭರಿತ ಸೇಬುಗಳನ್ನು ಹಂಚಲಾಗುತ್ತಿದೆ. ನೀವು ಬುದ್ಧ ಆಗಬೇಡಿ, ಶುದ್ಧರಾಗಿ ಸಾಕು. ಬಂಧುತ್ವ ಎಂತಹ ಅದ್ಭುತ ಮಾತು. ಬಂಧುಗಳೂ ದಾಯಾದಿಗಳೂ ಮನುಷ್ಯರೇ. ಬಂಧುತ್ವದಲ್ಲಿ ಅದ್ಭುತವಾದ ಶಕ್ತಿ ಇದೆ. ನಾವು ಮಾಡುವ ಕೆಲಸದಲ್ಲಿ ಶುದ್ಧತೆ ಇರಬೇಕು ಎಂದು ಹೇಳಿದರು.
ಎಲ್ಲರೂ ಹೊಣೆಯರಿತ ಜ್ಞಾನಿಯಾಗಬೇಕು. ಸಿಂಹಾಸನದ ಮೇಲೆ ಕುಳಿತವನ ಕಾಲು ನೆಲದ ಮೇಲೆ ಇರಬೇಕು. ಪ್ರಜಾಪ್ರಭುತ್ವದಲ್ಲಿ ರಾಜಪ್ಪ ದಳವಾಯಿ ಒಂದು ಒಳ್ಳೆ ರೂಪಕ. ಒಬ್ಬರೇ ರಾಜ, ದಳವಾಯಿ ಆಗಬೇಕು. ನೀವು ಶುದ್ಧರಾಗಿ, ಸೇವೆಯಲ್ಲಿ ಶುದ್ಧತೆ ಇರಲಿ. ಶುದ್ಧತೆಯನ್ನು ಹೊಂದಿದವರನ್ನು ಅಧಿಕಾರಕ್ಕೆ ತನ್ನಿ ಎಂದರು.