ಪ್ರೀತಿ ವಿಶ್ವಾಸದ ಮೂಲಕ ಸಮಾಜ ಕಟ್ಟೋಣ: ಮಂಗಳೂರಿನ ‘ಪ್ರಜಾಸೌಧ’ ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ ಹಾರೈಕೆ

ಹೊಸದಿಗಂತ ವರದಿ, ಮಂಗಳೂರು:

ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಮನುಷ್ಯರು ಮನುಷ್ಯರನ್ನು ಪ್ರೀತಿಸುವ ಸರ್ವ ಜನಾಂಗದ ಶಾಂತಿಯ ತೋಟ. ಈ ಸಮಾಜವನ್ನು ನಾವು ಇನ್ನಷ್ಟು ಗಟ್ಟಿಗೊಳಿಸೋಣ. ಜೊತೆಗೆ ಅಸಮಾನತೆಯ ಸಮಾಜವನ್ನು ಸುಧಾರಿಸಿ ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಸಾಗುವ ಮೂಲಕ ಪ್ರೀತಿ ವಿಶ್ವಾಸದ ಸಮಾಜ ಕಟ್ಟೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಮಂಗಳೂರಿನ ಪಡೀಲ್‌ನಲ್ಲಿ ನಿರ್ಮಾಣಗೊಂಡಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ವನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದ ಅವರು, ಶೈಕ್ಷಣಿಕ ರಂಗದಲ್ಲಿ ಹೆಸರು ಮಾಡಿರುವ ಅತ್ಯಂತ ಪ್ರಜ್ಞಾವಂತರೇ ಇರುವ ಜಿಲ್ಲೆ. ದಕ್ಷಿಣ ಕನ್ನಡ. ಇಲ್ಲಿ ಕೋಮುಗಲಭೆಗಳು ನಡೆಯಬಾರದು. ಜನತೆ ಪ್ರೀತಿ ವಿಶ್ವಾಸದಿಂದ ಬಾಳಿ ಬದುಕಬೇಕು ಎಂದರು.

ಆರು ವರ್ಷಗಳ ಹಿಂದೆ ಪಡೀಲ್‌ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ನಾನೇ ಶಂಕುಸ್ಥಾಪನೆ ನೆರವೇರಿಸಿದ್ದೆ. ಇದೀಗ ನಾನೇ ಕಟ್ಟಡ ಉದ್ಘಾಟಿಸಿವು ಭಾಗ್ಯ ಒದಗಿ ಬಂದಿದೆ. ಇದು ಜನತೆಯ ಸೌಧ. ಅಧಿಕಾರಿಗಳು ಮುತುವರ್ಜಿ ವಹಿಸುವ ಮೂಲಕ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅವರು ಹೇಳಿದರು.

ನಾವು ನುಡಿದಂತೆ ನಡೆದ ಸರ್ಕಾರ ನಮ್ಮದು. ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಕೊಡುವ ಭರವಸೆ ನೀಡಿದ್ದೆವು. ಅದರಂತೆ ಪುತ್ತೂರಿಗೂ ಮೆಡಿಕಲ್ ಕಾಲೇಜು ಕೊಟ್ಟಿದ್ದೇವೆ. ಸದ್ಯ 250 ಬೆಡ್ ಗಳ ಆಸ್ಪತ್ರೆ ಮಾಡುತ್ತೇವೆ. ಮುಂದೆ ಮತ್ತೆ 250 ಬೆಡ್ ಗಳನ್ನು ವಿಸ್ತರಿಸುತ್ತೇವೆ ಎಂದು ಮುಖ್ಯಮಂತ್ರಿಗಳು ನುಡಿದರು.

ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4.5 ಲಕ್ಷ ಕೋಟಿ ತೆರಿಗೆ ನೀಡಲಾಗುತ್ತಿದೆ. ಕೇಂದ್ರ ರಾಜ್ಯಕ್ಕೆ ವಾಪಾಸ್ ಕೊಡುವುದು, ಸ್ಮಾರ್ಟ್ ಸಿಟಿ ಯೋಜನೆ ಸೇರಿ ಕೇವಲ 65 ಸಾವಿರ ಕೋಟಿ ಮಾತ್ರ. ಅಂದರೆ ಶೇ.15-16 ರಷ್ಟು ಮಾತ್ರ ವಾಪಾಸ್ ಕೊಡುತ್ತಿದೆ. ಇದು ಕೇಂದ್ರ ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಎಂದವರು ಹೇಳಿದರು.

ದ.ಕ. ಶೀಘ್ರ ಪೋಡಿಮುಕ್ತ ಜಿಲ್ಲೆ
ರೈತರ ಮತ್ತು ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಹೆಚ್ಚಿವೆ. ಕಂದಾಯ ಇಲಾಖೆಯಲ್ಲೂ ಮಹತ್ತರ ಬದಲಾವಣೆಯಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆ ಸದ್ಯದಲ್ಲೇ ಪೋಡಿಮುಕ್ತ ಜಿಲ್ಲೆ ಆಗಲಿದೆ. ಸಚಿವ ಕೃಷ್ಣ ಬೈರೇಗೌಡ ಅವರು ವಿಶೇಷ ಕಾಳಜಿಸಿದ್ದು, ವಹಿಸಿ ಜಿಲ್ಲೆಯನ್ನು ಪೋಡಿಮುಕ್ತ ಮಾಡುವ ದಿಕ್ಕಿನಲ್ಲಿ ಕೆಲಸಗಳು ಆಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್, ಆರೋಗ್ಯ ಸಚಿವ ಸಚಿವರಾದ ದಿನೇಶ್ ಗುಂಡೂರಾವ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸಂಸದ ಕ್ಯಾ.ಬ್ರಿಜೇಶ್ ಚೌಟ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!