ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಗುರುವಾರ ದೇಶ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಇಬ್ಬರು ಸರ್ಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಿದ್ದಾರೆ.
ಸಂವಿಧಾನದ 311ನೇ ವಿಧಿಯನ್ನು ಅನ್ವಯಿಸುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಸಹಾಯಕ ವೈರ್‌ಲೆಸ್ ಆಪರೇಟರ್ ಆಗಿದ ಬಷರತ್ ಅಹ್ಮದ್ ಮಿರ್ ಮತ್ತು ಸಾರ್ವಜನಿಕ ಕಾರ್ಯ(ಆರ್ & ಬಿ) ಇಲಾಖೆಯಲ್ಲಿ ಹಿರಿಯ ಸಹಾಯಕರಾಗಿದ್ದ ಇಶ್ತಿಯಾಕ್ ಅಹ್ಮದ್ ಮಲಿಕ್ ಅವರನ್ನು ವಜಾಗೊಳಿಸಿದ್ದಾರೆ.
ಈ ಇಬ್ಬರು ನೌಕರರು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ ಎಂಬುದು ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಗಳ ಗಮನಕ್ಕೆ ಬಂದಿದೆ. ಇದು ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಸಾಬೀತುಪಡಿಸುತ್ತದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.