ನಾವು ‘ಒಳ್ಳೆಯವರು’ ಆಗಿರೋಕೆ ತುಂಬಾ ಕಷ್ಟ ಪಡ್ತೀವಿ. ಯಾರಿಗೂ ಬೇಸರ ಆಗಬಾರದು, ಯಾರೂ ತಪ್ಪಾಗಿ ಅರ್ಥ ಮಾಡ್ಕೊಳ್ಳಬಾರದು, ನಮ್ಮಿಂದ ಯಾರ ಜೀವನಕ್ಕೂ ಅಡ್ಡಿಯಾಗಬಾರದು ಅನ್ನೋ ಭಯದಲ್ಲೇ ದಿನ ಕಳೆಯುತ್ತೆ. ಹೀಗಿರೋವಾಗ ನಿಧಾನವಾಗಿ ಒಂದು ಸಣ್ಣ ಪ್ರಶ್ನೆ ಮನಸ್ಸಿನೊಳಗೆ ಮೌನವಾಗಿ ಕೂತಿರುತ್ತೆ ನಾವು ಯಾರಿಗೋಸ್ಕರ ಬದುಕ್ತಿದ್ವಿ? ಅಂತ.
ಎಲ್ಲರನ್ನೂ ತೃಪ್ತಿಪಡಿಸಬೇಕು ಅನ್ನೋ ಹವ್ಯಾಸ ಮೊದಲಿಗೆ ಗುಣವಾಗಿ ಕಾಣಿಸುತ್ತೆ. ಸಹನೆ, ಹೊಂದಾಣಿಕೆ, ತ್ಯಾಗ ಈ ಪದಗಳು ಸಮಾಜದಲ್ಲಿ ಪ್ರಶಂಸೆಯನ್ನೇ ತರುತ್ತವೆ. ಆದರೆ ಕಾಲಕಾಲಕ್ಕೆ ಅದೇ ಗುಣ ನಮ್ಮ ಮೇಲೆ ಭಾರವಾಗ್ತಾ ಹೋಗುತ್ತೆ. ನಮ್ಮ ಇಷ್ಟಗಳು ‘ನಂತರ ನೋಡೋಣ’ ಅನ್ನೋ ಪಟ್ಟಿಗೆ ಸೇರುತ್ತವೆ. ನಮ್ಮ ಅಭಿಪ್ರಾಯಗಳು “ಇದರಿಂದ ಏನು ಪ್ರಯೋಜನ?” ಅನ್ನೋ ಪ್ರಶ್ನೆಯ ಮುಂದೆ ಸೋತುಬಿಡುತ್ತವೆ.
ನಿಜ ಹೇಳ್ಬೇಕಂದ್ರೆ, ನಾವು ‘ಹೌದು’ ಅಂತ ಹೇಳಿದ ಪ್ರತಿಯೊಂದು ಕ್ಷಣದಲ್ಲೂ, ಮನಸ್ಸು ‘ಇಲ್ಲ’ ಅಂತ ಕಿರುಚಿರುತ್ತೆ. ಆದ್ರೆ ಆ ಧ್ವನಿಗೆ ನಾವು ಕಿವಿ ಕೊಡೋದಿಲ್ಲ. ಏಕೆಂದರೆ, ನಮ್ಮ ಖುಷಿಗಿಂತ ಇತರರ ಒಪ್ಪಿಗೆ ದೊಡ್ಡದಾಗಿ ಕಾಣಿಸುತ್ತೆ. ಅವರ ನಗು ನಮ್ಮ ಶಾಂತಿಯ ಬೆಲೆಗೆ ಬಂದಿದ್ರೂ ಅದನ್ನೇ ಗೆಲುವು ಅಂತ ಭಾವಿಸಿಬಿಡ್ತೀವಿ.
ಇದನ್ನೂ ಓದಿ:
ಇದ್ರಲ್ಲೇ ಅತಿದೊಡ್ಡ ಅನ್ಯಾಯ ಆಗೋದು. ಬೇರೆ ಯಾರೂ ನಮ್ಮನ್ನು ನೋಯಿಸೋ ಮುಂಚೆ, ನಾವು ನಮಗೇ ನೋವು ಕೊಡ್ತಾ ಇರುತ್ತೀವಿ. ದಣಿವು ಕಾಣಿಸೋದಿಲ್ಲ, ಬೇಸರ ಹೇಳಿಕೊಳ್ಳೋದಿಲ್ಲ, ಒತ್ತಡವನ್ನೂ ‘ಸರಿ ಇದೆ’ ಅಂತ ನಗು ಮುಖದಲ್ಲಿ ಮುಚ್ಚಿಬಿಡ್ತೀವಿ. ಹೀಗೆ ನಮ್ಮೊಳಗಿನ ನಾವು, ಯಾರಿಗೂ ಕಾಣದಂತೆ ನಿಧಾನವಾಗಿ ಕಳೆದುಹೋಗ್ತಾ ಹೋಗುತ್ತೇವೆ.
ನಮ್ಮ ಖುಷಿ, ನಮ್ಮ ಮಿತಿಗಳು, ನಮ್ಮ ‘ಇಲ್ಲ’ ಅನ್ನೋ ಹಕ್ಕು—ಇವುಗಳಿಗೂ ಮೌಲ್ಯ ಇದೆಯಲ್ಲವಾ? ಕೆಲವೊಮ್ಮೆ ಒಬ್ಬರನ್ನು ಬೇಸರ ಮಾಡೋದಕ್ಕಿಂತ, ನಮಗೇ ಸತ್ಯವಾಗಿರೋದು ಮುಖ್ಯ. ಎಲ್ಲರಿಗೂ good ಆಗಿರೋದು ಸಾಧ್ಯವೇ ಇಲ್ಲ. ಆದ್ರೆ ನಮಗೇ honest ಆಗಿರೋದು ಸಾಧ್ಯ. ಅಷ್ಟೇ ಸಾಕು, ಜೀವನ ಸ್ವಲ್ಪ ಹಗುರವಾಗೋಕೆ.



