ಇಂದಿನ ಡಿಜಿಟಲ್ ಯುಗದಲ್ಲಿ ಜನರು ತಮ್ಮ ಜೀವನದ ಪ್ರತಿಯೊಂದು ತಿರುವು, ಅನುಭವ, ಭಾವನೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಆದರೆ ಮನಃಶಾಸ್ತ್ರಜ್ಞರ ಪ್ರಕಾರ, ಎಲ್ಲವನ್ನೂ ಬಹಿರಂಗವಾಗಿ ಹೇಳಿಕೊಳ್ಳುವುದು ಹೆಮ್ಮೆಯ ವಿಷಯವಲ್ಲ. ಕೆಲವೊಮ್ಮೆ ಕೆಲವು ವಿಚಾರಗಳನ್ನು ಹೃದಯದೊಳಗೆ ಇರಿಸಿಕೊಂಡು ಬಾಳುವುದು ಆರೋಗ್ಯಕರ ಜೀವನಕ್ಕೆ, ಭದ್ರತೆಗೆ ಹಾಗೂ ಸಂತೃಪ್ತಿಗಾಗಿ ಮುಖ್ಯವಾಗಿದೆ. ಗೌಪ್ಯತೆಯ ಅಗತ್ಯತೆ ಇಂದಿನ ಜಗತ್ತಿನಲ್ಲಿ ಹೆಚ್ಚುತ್ತಿದೆ.
ಮನಸ್ಸಿಗೆ ಶಾಂತಿ, ಒತ್ತಡದಿಂದ ವಿಮುಕ್ತಿ
ನಮ್ಮ ವೈಯಕ್ತಿಕ ವಿಷಯಗಳನ್ನು ಎಲ್ಲರ ಮುಂದೆ ಹಂಚಿಕೊಳ್ಳದೇ ಇರೋದು, ಅನಗತ್ಯ ಟೀಕೆಗಳು ಮತ್ತು ಅಪಹಾಸ್ಯದಿಂದ ದೂರವಿರಲು ಸಹಾಯ ಮಾಡುತ್ತದೆ. ಸಾಮಾಜಿಕ ಒತ್ತಡವಿಲ್ಲದೆ ಬಾಳಲು, ಶಾಂತವಾದ ಜಾಗವನ್ನು ಸೃಷ್ಟಿಸುತ್ತದೆ ಇದು ಅನುವು ಮಾಡಿಕೊಡುತ್ತದೆ. ನಾವು ನಾವುಗಳಾಗಿ, ನಿಷ್ಕಳಂಕವಾಗಿ ಬಾಳಲು ಇದು ಸಹಾಯಕ.
ನಿಮ್ಮ ಕಥೆಯ ಮೇಲೆ ನೀವು ಹಿಡಿತ ಸಾಧಿಸುವಿರಿ
ಅತಿಯಾಗಿ ಹಂಚಿಕೊಳ್ಳುವ ಮೂಲಕ ಇತರರಿಗೆ ನಿಮ್ಮ ಬಗ್ಗೆ ಮಾತನಾಡಲು, ಊಹೆ ಹಾಕಲು ಅವಕಾಶ ಸಿಗುತ್ತದೆ. ಆದರೆ, ಗೌಪ್ಯತೆ ಕಾಯ್ದುಕೊಳ್ಳುವ ಮೂಲಕ ನಿಮ್ಮ ಬಗ್ಗೆ ಅವರು ಏನು ತಿಳಿಯಬೇಕೆಂಬುದನ್ನು ನೀವು ನಿರ್ಧರಿಸಬಹುದು. ಇದು ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದರ ಜೊತೆಗೆ ತಪ್ಪು ಮಾಹಿತಿ ಹರಡುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
ಭದ್ರತೆ ಮತ್ತು ವೈಯಕ್ತಿಕ ಸುರಕ್ಷತೆ
ಸಾಮಾಜಿಕ ಮಾಧ್ಯಮಗಳಲ್ಲಿ ತಾವು ಎಲ್ಲವನ್ನೂ ಹಂಚಿಕೊಳ್ಳುವ ಮೂಲಕ ಕೆಲವರು ತಾವು ಅನಗತ್ಯ ಅಪಾಯಗಳಿಗೆ ತುತ್ತಾಗುತ್ತಿರುವುದು ಕಂಡುಬರುತ್ತದೆ. ಖಾಸಗಿತನವನ್ನು ಕಾಪಾಡಿಕೊಳ್ಳುವುದರಿಂದ ನಿಮ್ಮ ವೈಯಕ್ತಿಕ ಮಾಹಿತಿ ದುರುಪಯೋಗವಾಗದಂತೆ ಜಾಗರೂಕತೆಯಿಂದ ಮುನ್ನೆಚ್ಚರಿಕೆ ವಹಿಸಬಹುದು. ಇದರಿಂದ ಭಾವನಾತ್ಮಕ ಹಾಗು ದೈಹಿಕ ಸುರಕ್ಷತೆ ಇರುತ್ತದೆ.
ನಿಮ್ಮ ನಿರ್ಧಾರಗಳಲ್ಲಿ ಮುಕ್ತತೆ
ಅಧಿಕವಾಗಿ ಹಂಚಿಕೊಳ್ಳುವ ಜನರು ಯಾವಾಗಲೂ ಇತರರ ಅಭಿಪ್ರಾಯಗಳ ಪ್ರಭಾವದಲ್ಲಿ ಬದುಕುತ್ತಾರೆ. ಆದರೆ ಖಾಸಗಿತನದ ಶಕ್ತಿ ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತದೆ. ಇತರರು ಏನು ಯೋಚಿಸುತ್ತಾರೆ ಎಂಬುದರ ಚಿಂತೆಯಿಲ್ಲದೆ, ನೀವು ನಿಮ್ಮ ಹೃದಯದ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳಬಹುದು. ಇದು ನಿಮ್ಮ ವ್ಯಕ್ತಿತ್ವವನ್ನು ರೂಪಿಸಲು ಸಹಕಾರಿ.
ನಿಜವಾದ ಸಂಬಂಧಗಳಿಗೆ ಬಲ
ಪ್ರತಿಯೊಂದು ವಿಷಯವನ್ನೂ ಎಲ್ಲರೊಂದಿಗೆ ಹಂಚಿಕೊಳ್ಳುವ ಬದಲು, ಕೆಲವು ವಿಷಯಗಳನ್ನು ಕೆಲವೇ ಸಮೀಪದವರೊಂದಿಗೆ ಮಾತ್ರ ಹಂಚಿಕೊಳ್ಳುವುದು, ನಂಬಿಕೆಯ ಸಂಬಂಧಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ. ಇದು ಆಳವಾದ ಸಂಭಂಧಗಳನ್ನು ರೂಪಿಸುವಂತೆ ಮಾಡುತ್ತದೆ. ಗೌಪ್ಯತೆಯ ಆಧಾರದ ಮೇಲೆ ಬೆಳೆಯುವ ಸಂಬಂಧಗಳು ಹೆಚ್ಚು ನೈಜವಾಗಿರುತ್ತವೆ, ಅವುಗಳಲ್ಲಿ ಅರ್ಥವಿರುವ ಭಾವನೆಗಳಿರುತ್ತವೆ.
ಇಂದಿನ ಬಹಿರಂಗ ಜಗತ್ತಿನಲ್ಲಿ ನಾವು ಎಲ್ಲವನ್ನೂ ಹಂಚಿಕೊಳ್ಳುವುದು ಕ್ರೇಜ್ ಆಗಿದ್ದರೂ, ಗೌಪ್ಯತೆ ಎನ್ನುವುದು ಹೊಸ ರೀತಿಯ ಶಕ್ತಿಯಾಗಿದೆ. ಇದು ಆತ್ಮಸ್ಥೈರ್ಯ, ಭದ್ರತೆ ಮತ್ತು ಸಂತೃಪ್ತಿಯಿಂದ ಕೂಡಿದ ಜೀವನಕ್ಕೆ ದಾರಿ ತೆರೆಯುತ್ತದೆ. ಹಂಚಿಕೊಳ್ಳುವದಕ್ಕೂ, ಮೌನವಾಗಿರುವುದಕ್ಕೂ ಸದುಪಯೋಗ ಮಾಡಿಕೊಂಡಾಗ ಜೀವನ ಹೆಚ್ಚು ಸಮತೋಲನದಾಯಕವಾಗುತ್ತದೆ.