ಜೀವನದಲ್ಲಿ ಸಾರ್ಥಕತೆ ಸಿಗೋದು ಯಾವಾಗ ಅನ್ನೋ ಪ್ರಶ್ನೆ ಎಲ್ಲರ ಮನಸ್ಸಿನಲ್ಲೂ ಯಾವಾಗಲಾದರೂ ಒಮ್ಮೆ ಬಂದೆ ಬಂದಿರುತ್ತೆ. ದೊಡ್ಡ ಸಾಧನೆ ಮಾಡಿದಾಗಾ? ನಮ್ಮ ಕನಸುಗಳು ನಿಜವಾದಾಗಾ? ಅಥವಾ ನಾವು ಇತರರಿಂದ ಮೆಚ್ಚುಗೆ ಪಡೆದಾಗಾ? ಹಲವರು ಇದಕ್ಕೆ ವಿಭಿನ್ನ ಉತ್ತರ ಕೊಡುತ್ತಾರೆ. ಆದರೆ ಸಾರ್ಥಕತೆ ಅಂದ್ರೆ ಒಂದು ದಿನ ಅಚಾನಕ್ ಸಿಗೋದಲ್ಲ. ಅದು ನಿಧಾನವಾಗಿ ಮನಸ್ಸಿನೊಳಗೆ ಬೆಳೆಯುವ ಒಂದು ಅನುಭವ.
ಹೆಚ್ಚಾಗಿ ನಾವು ಸಾರ್ಥಕತೆಯನ್ನು ದೊಡ್ಡ ಗೆಲುವುಗಳಲ್ಲಿ ಹುಡುಕುತ್ತೇವೆ. ಉತ್ತಮ ಕೆಲಸ, ಹೆಚ್ಚಿನ ಹಣ, ದೊಡ್ಡ ಹೆಸರು ಇವುಗಳೆಲ್ಲ ಜೀವನವನ್ನು ಪೂರ್ಣಗೊಳಿಸುತ್ತವೆ ಅಂತ ಭಾವಿಸುತ್ತೇವೆ. ಆದರೆ ಇವು ಸಿಕ್ಕರೂ ಮನಸ್ಸು ಖಾಲಿ ಅನ್ನಿಸೋ ಕ್ಷಣಗಳು ಬರುತ್ತವೆ. ಅವಾಗ ಗೊತ್ತಾಗುತ್ತೆ, ಸಾರ್ಥಕತೆ ಹೊರಗಿನ ವಿಷಯಗಳಲ್ಲಿ ಅಲ್ಲ; ಅದು ನಮ್ಮ ಒಳಗಿನ ತೃಪ್ತಿಯಲ್ಲಿ ಇರುತ್ತದೆ ಅಂತ.
ನಮ್ಮಿಂದ ಯಾರಿಗಾದರೂ ಒಂದು ನಗು ಮೂಡಿದಾಗ, ನಾವು ಮಾಡಿದ ಕೆಲಸ ಯಾರಿಗಾದರೂ ಉಪಯೋಗವಾದಾಗ, ನಮ್ಮ ದಿನ ಮುಗಿದಾಗ “ಇವತ್ತು ವ್ಯರ್ಥವಾಗಲಿಲ್ಲ” ಅನ್ನೋ ಭಾವನೆ ಬಂದಾಗ ಅಲ್ಲಿ ಸಾರ್ಥಕತೆ ನಿಧಾನವಾಗಿ ಕಾಣಿಸಿಕೊಳ್ಳುತ್ತದೆ. ಅದು ದೊಡ್ಡ ಘಟನೆಗಳಲ್ಲೇ ಸಿಗೋದೇ ಅಲ್ಲ; ಚಿಕ್ಕ ಚಿಕ್ಕ ಕ್ಷಣಗಳಲ್ಲೂ ಅದು ಕಣ್ಣಾಮುಚ್ಚಾಲೆ ಆಡುತ್ತಿರುತ್ತದೆ.
ಇದನ್ನೂ ಓದಿ:
ಕೆಲವೊಮ್ಮೆ ನಮ್ಮ ಜೀವನದ ದಾರಿ ಸ್ಪಷ್ಟವಾಗಿರೋದಿಲ್ಲ. ನಾವು ಮಾಡುತ್ತಿರುವ ಕೆಲಸದ ಅರ್ಥವೇನು ಅನ್ನೋ ಗೊಂದಲವೂ ಇರುತ್ತದೆ. ಆದರೆ ನಾವು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ, ನಮ್ಮ ಮನಸ್ಸಿಗೆ ಸತ್ಯವಾಗಿದ್ದೇವೆ, ನಮ್ಮ ಸುತ್ತಮುತ್ತ ಇರುವವರನ್ನು ಕಾಳಜಿಯಿಂದ ನೋಡುತ್ತಿದ್ದೇವೆ ಅಂದ್ರೆ, ಅಲ್ಲಿ ಸಾರ್ಥಕತೆ ಬೀಜ ಬಿತ್ತಿದಂತೇ. ಅದು ಒಂದೇ ದಿನ ದೊಡ್ಡ ಮರವಾಗುತ್ತದೆ.
ಸಾರ್ಥಕತೆ ಸಿಗೋದು ಯಾವಾಗ ಅಂದ್ರೆ, ನಾವು ನಮ್ಮನ್ನು ಇತರರ ಜೊತೆ ಹೋಲಿಸೋದು ನಿಲ್ಲಿಸಿದಾಗ. ನಮ್ಮ ಜೀವನದ ವೇಗವನ್ನು ಒಪ್ಪಿಕೊಂಡಾಗ. ನಾವು ಏನು ಮಾಡುತ್ತಿದ್ದೇವೋ ಅದರಲ್ಲಿ ಅರ್ಥ ಕಂಡುಕೊಂಡಾಗ. ಹೊರಗಿನ ಮೆಚ್ಚುಗೆಗಿಂತ ಒಳಗಿನ ತೃಪ್ತಿಯನ್ನು ಕೇಳೋದು ಕಲಿತಾಗ.



