February 13, 2026
Friday, February 13, 2026
spot_img

LIFE | ನಮ್ಮನ್ನ ಇತರರ ಜೊತೆ ಹೋಲಿಕೆ ಮಾಡೋದು ಯಾಕೆ ತಪ್ಪು ಗೊತ್ತಾ?

ಜೀವನ ಅನ್ನೋದು ಒಂದು ರೇಸ್ ಟ್ರ್ಯಾಕ್ ಅಲ್ಲ. ಅದು ಒಂದೊಂದು ಮನುಷ್ಯನಿಗೂ ಬೇರೆ ಬೇರೆ ದಾರಿಗಳನ್ನ ಕೊಡುವ ಪ್ರಯಾಣ. ಆದರೂ ನಾವು ಏನು ಮಾಡ್ತೀವಿ ಗೊತ್ತಾ? ನಮ್ಮ ದಾರಿಯನ್ನ ಬಿಟ್ಟು, ಪಕ್ಕದವರ ದಾರಿಯನ್ನು ಅಳೆಯೋ ಕೆಲಸ ಮಾಡ್ತೀವಿ. “ಅವಳು ಇಷ್ಟು ಸಾಧನೆ ಮಾಡಿದ್ಲು”, “ಅವನು ಇಷ್ಟು ಹಣ ಗಳಿಸ್ತಾನೆ”, “ಅವಳು ಇಷ್ಟು ಸ್ಲಿಮ್ ಆಗಿದ್ದಾಳೆ”… ಹೀಗೆ ಹೋಲಿಕೆಗಳು ನಿಧಾನವಾಗಿ ನಮ್ಮ ಮನಸ್ಸಿನ ಶಾಂತಿಯನ್ನು ಕಿತ್ತುಕೊಳ್ಳುತ್ತವೆ.

ಹೋಲಿಕೆ ಯಾಕೆ ತಪ್ಪು ಅಂದ್ರೆ, ಅದು ನಮ್ಮ ಆತ್ಮವಿಶ್ವಾಸದ ಬೇರುಗಳಿಗೆ ಹೊಡೆತ ಕೊಡುತ್ತದೆ. ನಾವು ಯಾವ ಮಟ್ಟಿಗೆ ಬಂದಿದ್ದೇವೆ ಅನ್ನೋದನ್ನ ನೋಡೋ ಬದಲು, ಇತರರು ಎಲ್ಲಿ ನಿಂತಿದ್ದಾರೆ ಅನ್ನೋದನ್ನ ಮಾತ್ರ ನೋಡ್ತೀವಿ. ಅದರಿಂದ ನಮ್ಮ ಪ್ರಯತ್ನಗಳೇ ಚಿಕ್ಕದಾಗಿ ಕಾಣಿಸಿಕೊಳ್ಳುತ್ತವೆ. ನಿನ್ನೆಗಿಂತ ಇಂದು ನಾವು ಸ್ವಲ್ಪ ಬೆಳೆದಿದ್ದೇವೆ ಅನ್ನೋದನ್ನ ಗಮನಿಸದೇ, ಇನ್ನೊಬ್ಬರ ನೂರನೇ ಹೆಜ್ಜೆ ನೋಡಿಕೊಂಡು ಬೇಸರಪಡುವುದು ನ್ಯಾಯವೇ?

ಪ್ರತಿಯೊಬ್ಬರ ಕಥೆಯೂ ವಿಭಿನ್ನ. ಯಾರೋ ಈಗ ಶುರು ಮಾಡ್ತಿದ್ದಾರೆ, ಯಾರೋ ಮಧ್ಯದಲ್ಲಿದ್ದಾರೆ, ಯಾರೋ ಕೊನೆಯ ಹಂತದಲ್ಲಿದ್ದಾರೆ. ಆದರೆ ನಾವು ಎಲ್ಲರನ್ನೂ ಒಂದೇ ಸಮಯದಲ್ಲಿ, ಒಂದೇ ಮಟ್ಟದಲ್ಲಿ ಅಳೆಯೋ ಪ್ರಯತ್ನ ಮಾಡ್ತೀವಿ. ಇದು ಅಸಮಾನ ಹೋಲಿಕೆ. ಬಿತ್ತನೆ ಮಾಡಿದ ಬೀಜಕ್ಕೂ, ಈಗಾಗಲೇ ಫಲ ಕೊಟ್ಟ ಮರಕ್ಕೂ ಹೋಲಿಕೆ ಮಾಡೋದು ಹೇಗೆ ಸರಿಯಾಗೋದಿಲ್ಲವೋ, ಹಾಗೆ.

ಇದನ್ನೂ ಓದಿ:

ಹೋಲಿಕೆ ಇನ್ನೊಂದು ಅಪಾಯ ಮಾಡುತ್ತದೆ — ಅದು ನಮ್ಮ ಸಂತೋಷ ಕಸಿದುಕೊಳ್ಳುತ್ತೆ. ನಾವು ನಮ್ಮ ಗೆಲುವುಗಳನ್ನು ಆಚರಿಸದೇ, “ಇದು ಸಾಕಾಗಲ್ಲ” ಅನ್ನೋ ಭಾವನೆ ಬೆಳೆಸಿಕೊಳ್ಳುತ್ತೇವೆ. ನಿಧಾನವಾಗಿ ನಮ್ಮ ಜೀವನದ ಸೊಗಸು ಕಡಿಮೆಯಾಗುತ್ತದೆ. ಹೋಲಿಕೆ ಸ್ಪರ್ಧೆ ಹುಟ್ಟಿಸಬಹುದು, ಆದರೆ ಅದು ಮನಸ್ಸಿಗೆ ಶಾಂತಿ ಕೊಡೋದಿಲ್ಲ. ನಮ್ಮನ್ನು ಹೋಲಿಸಬೇಕಾದರೆ ಅದು ನಾವು ನಿನ್ನೆಗಿಂತ ಇಂದು ಸ್ವಲ್ಪ ಧೈರ್ಯಶಾಲಿಯಾಗಿದ್ದೇವಾ? ಸ್ವಲ್ಪ ಶಾಂತಿಯುತವಾಗಿದ್ದೇವಾ? ಸ್ವಲ್ಪ ಉತ್ತಮವಾಗಿ ಯೋಚಿಸಿದ್ದೇವಾ? ಅಷ್ಟೇ ಸಾಕು. ಏಕೆಂದರೆ ಜೀವನದಲ್ಲಿ ನಿಜವಾದ ಗೆಲುವು, ಇನ್ನೊಬ್ಬರನ್ನು ಮೀರೋದಲ್ಲ… ನಮ್ಮನ್ನೇ ಮಿರೋದ್ರಲ್ಲಿದೆ.

ಹೀಗಾಗಿ, ಮುಂದಿನ ಸಲ ಯಾರನ್ನಾದರೂ ನೋಡಿ “ನಾನು ಅವರಂತಾಗಬೇಕು” ಅನ್ನಿಸುವಾಗ, ಕ್ಷಣ ಮಾತ್ರ ನಿಲ್ಲಿ. “ನಾನು ನನ್ನಂತಾಗೋಕೆ ಸಾಕಷ್ಟು ಪ್ರಯತ್ನ ಮಾಡ್ತಿದ್ದೀನಾ?” ಅನ್ನೋ ಪ್ರಶ್ನೆ ಕೇಳಿ. ಉತ್ತರ ಸಿಕ್ಕಾಗ, ಹೋಲಿಕೆಯ ಅಗತ್ಯವೇ ಇರುವುದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !