ಹೊಸದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸಮೀಪದ ಕೋಡಿಂಬಾಳ ಗ್ರಾಮದ ಪುಳಿಕ್ಕುಕ್ಕು ಎಂಬಲ್ಲಿ ಕಡಬ-ಪಂಜ ಮುಖ್ಯರಸ್ತೆಯಲ್ಲಿನ ಸೇತುವೆಯ ಮೇಲಿನಿಂದ ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾತನನ್ನು ರಕ್ಷಣೆ ಮಾಡಿ ಜೀವದಾನ ನೀಡಿದ ಘಟನೆ ಸೋಮವಾರ ಸಂಭವಿಸಿದೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಸಿರ ತಾಲೂಕಿನ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದ ರವಿ ಕುಮಾರ್(40) ಜೀವದಾನ ಪಡೆದಾತ. ಸೇತುವೆಯಿಂದ ನೀರಿಗೆ ಜಿಗಿದು ನೆರೆನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನದಿಯ ಮಧ್ಯೆ ಇದ್ದ ಪೊದೆಯಲ್ಲಿ ಸಿಲುಕಿಕೊಂಡು ಸಹಾಯಕ್ಕೆ ಬೊಬ್ಬಿಡುತ್ತಿದ್ದ ಆತನನ್ನು ಕಡಬ ಪೊಲೀಸರ ಮಾರ್ಗದರ್ಶನದಲ್ಲಿ ಆಗ್ನಿಶಾಮಕ ದಳದ ಸಿಬಂದಿಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡದ ಸದಸ್ಯರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನದಿಯಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅವಿವಾಹಿತನಾಗಿರುವ ರವಿ ಕುಮಾರ್ ಡಿಪ್ಲೊಮಾ ಪದವೀಧರನಾಗಿದ್ದು, ಉದ್ಯೋಗ ಅರಸಿಕೊಂಡು 6 ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನ ಮಾರ್ತಹಳ್ಳಿಯಲ್ಲಿ ವಾಸ ಮಾಡಿಕೊಂಡು ಆನ್‍ಲೈನ್ ಟ್ರೇಡಿಂಗ್ ವ್ಯವಹಾರ ನಡೆಸುತ್ತಾ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಲಕ್ಷಾಂತರ ರೂ. ಕಳೆದುಕೊಂಡಿದ್ದರು ಎಂದು ಹೇಳಲಾಗಿದೆ.
ಆರ್ಥಿಕ ಸಂಕಷ್ಟದಿಂದ ತೀರಾ ನೊಂದುಕೊಂಡಿದ್ದ ಅವರು ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ದೇವರ ದರ್ಶನ ಮುಗಿಸಿ ಭಾನುವಾರ ಸಂಜೆ ಪುಳಿಕುಕ್ಕು ಎಂಬಲ್ಲಿಗೆ ಬಂದು ತನ್ನ ಬ್ಯಾಗನ್ನು ಸೇತುವೆ ಪಕ್ಕದ ಬಸ್ ನಿಲ್ದಾಣದಲ್ಲೇ ಇರಿಸಿ ತನ್ನ ಕೈಯನ್ನು ಯಾವುದೋ ಆಯುಧದಿಂದ ಗಾಯ ಮಾಡಿಕೊಂಡು ನದಿಗೆ ಹಾರಿದ್ದಾರೆ. ತುಂಬಿ ಹರಿಯುತ್ತಿದ್ದ ಕುಮಾರಧಾರ ನದಿಗೆ ಹಾರಿದ ಅವರು ಅದೃಷ್ಟವಷಾತ್ ಪೊದೆಯೊಂದು ಸಿಕ್ಕಿದ ಕಾರಣ ಅದರಲ್ಲಿ ಸಿಲುಕಿಕೊಂಡಿದ್ದರು. ಭಾನುವಾರ ಸಂಜೆ ಸುಮಾರು 5 ಗಂಟೆಯಿಂದ ಪೊದೆಯಲ್ಲಿ ಸಿಲುಕಿಕೊಂಡು ಸೋಮವಾರ ಬೆಳಗ್ಗಿನ ತನಕ ಸುಮಾರು 17 ತಾಸು ಗಾಳಿ ಮಳೆಗೆ ಜೀವನ್ಮರಣ ಹೋರಾಟ ಮಾಡಿದ್ದ ಅವರು ರಕ್ಷಣೆಗಾಗಿ ಸಾಕಷ್ಟು ಬೊಬ್ಬೆ ಹೊಡೆದಿದ್ದಾರೆ. ಸೋಮವಾರ ಬೆಳಗ್ಗೆ ಆತನ ರೋದನ ಕೇಳಿದ ಸ್ಥಳೀಯರು ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡದ ಸದಸ್ಯರು ಬೋಟ್‍ನ ಮೂಲಕ ಅವರು ನೀರಿನಲ್ಲಿ ಸಿಲುಕಿಕೊಂಡಿದ್ದ ಜಾಗಕ್ಕೆ ತೆರಳಿ ಆತನನ್ನು ರಕ್ಷಣೆ ಮಾಡಿದ್ದಾರೆ.
ಅವರಲ್ಲಿದ್ದ ಮೊಬೈಲ್ ಫೋನ್ ತುಂಬಿ ಹರಿಯುವ ನದಿಯಲ್ಲಿ ನಾಪತ್ತೆಯಾಗಿದೆ. ಅವರು ಬಸ್ ತಂಗುದಾಣದಲ್ಲಿ ಇರಿಸಿದ ಬ್ಯಾಗ್‍ನಲ್ಲಿದ್ದ ಪ್ಯಾಂಟ್ ಕಿಸೆಯಲ್ಲಿ ರೂ.10 ಸಾವಿರ ನಗದು ಪತ್ತೆಯಾಗಿದೆ. ಕೈಗೆ ಗಾಯವಾದ ಕಾರಣ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಎಸ್‍ಐ ಅಭಿನಂದನ್ ಅವರ ಮಾರ್ಗದರ್ಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದೊಂದಿಗೆ ಧರ್ಮಸ್ಥಳ ಶೌರ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡದ ಕಡಬ ಘಟಕದ ಸದಸ್ಯರಾದ ಮುರಳಿ ಮೂರಾಜೆ, ಧನಂಜಯ, ಪ್ರಶಾಂತ್ ಎನ್.ಎಸ್., ರುಕ್ಮಿಣಿ, ರಾಜೇಶ್ ಹಾಗೂ ಗಣೇಶ್ ಕೈಜೋಡಿಸಿದ್ದಾರೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ ಕಡಬ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿದ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಹಾಗೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ ಅವರು ಘಟನೆಯ ಬಗ್ಗೆ ಮಾಹಿತಿ ಪಡೆದರು.