ಒಂಟಿತನವೇ ಉರುಳಾಗುವ ಕ್ಷಣಗಳು ಬರುತ್ತವೆ. ನಂಬಿಕೆ, ನೆಮ್ಮದಿ, ಆಪ್ತರು ಎಲ್ಲವೂ ಕೈಚೆಲ್ಲಿದಂತಾಗುತ್ತದೆ. ಬದುಕು ಸಾಕಾಯಿತು ಎಂದು ಮನಸ್ಸು ಹೇಳಿದರೂ, ನೆನಪಿರಲಿ, ಇರುಳಿನ ನಂತರವೇ ಸೂರ್ಯೋದಯ. ಬದುಕು ಎಂದರೆ ಕಷ್ಟಗಳ ಸರಮಾಲೆಯಲ್ಲ, ಅದು ತಾಳ್ಮೆಯ ಪರೀಕ್ಷೆ. ಯಾವ ದುಃಖವೂ ಶಾಶ್ವತವಲ್ಲ. ಕಣ್ಣೀರು ಮುಗಿದ ನಂತರ ನಗು ಅರಳುತ್ತದೆ. ಇಂತಹ ಸಮಯದಲ್ಲಿ ಮನಸ್ಸು ಕುಗ್ಗದಂತೆ ಈ 6 ಟಿಪ್ಸ್ ನಿಮಗೆ ಹೊಸ ಬಲ ನೀಡುತ್ತವೆ.
- ಕಷ್ಟ ತಾತ್ಕಾಲಿಕ – ವಿಶ್ವಾಸ ಶಾಶ್ವತ: ಯಾವ ಕಷ್ಟವೂ ಇಂದಿನಿಂದ ನಾಳೆಯವರೆಗೆ ಇರೋದಿಲ್ಲ. ಬಂಡೆಯಂತಿರುವ ಸಮಸ್ಯೆ ನಾಳೆ ಕರಗುವ ಸಾಧ್ಯತೆಯಿದೆ. ಧೈರ್ಯದಿಂದ ಎದುರಿಸಿದರೆ ಕಷ್ಟವು ನಿಮಗೆ ಶಕ್ತಿ ಕೊಡುತ್ತದೆ.
- ಹಳೆಯ ಗೆಲುವುಗಳ ನೆನಪು: ನೀವು ಗೆದ್ದ ದಿನಗಳನ್ನು, ಖುಷಿಯಿಂದ ನಕ್ಕ ಕ್ಷಣಗಳನ್ನು ನೆನಪಿಸಿಕೊಳ್ಳಿ. ಅವು ನಿಮ್ಮ ಮನಸ್ಸಿಗೆ ನೂತನ ಉತ್ಸಾಹ ನೀಡುತ್ತವೆ ಮತ್ತು “ಈ ಕಷ್ಟವೂ ಕಳೆಯುತ್ತದೆ” ಎಂಬ ನಂಬಿಕೆ ಮೂಡಿಸುತ್ತವೆ.
- ಪ್ರೇರಣೆ ಹುಡುಕಿ, ನಕಾರಾತ್ಮಕತೆ ಬಿಟ್ಟುಬಿಡಿ: ದುಃಖದ ಕಥೆಗಳನ್ನು ಕೇಳಿದರೆ ನೋವು ಹೆಚ್ಚಾಗುತ್ತದೆ. ಬದಲಿಗೆ ಪ್ರೇರೇಪಕ ಪುಸ್ತಕ, ಪಾಡ್‌ಕಾಸ್ಟ್ ಅಥವಾ ವ್ಯಕ್ತಿಗಳ ಮಾತು ಆಲಿಸಿ. ಧನಾತ್ಮಕ ಚಿಂತನೆಗಳು ಮನಸ್ಸನ್ನು ಹಗುರ ಮಾಡುತ್ತವೆ.
- ಸಣ್ಣ ಗುರಿಗಳಿಂದ ಪ್ರಾರಂಭಿಸಿ: ಮಹತ್ವದ ಬದಲಾವಣೆಗಳ ಹಿಂದೆ ಸಣ್ಣ ಹೆಜ್ಜೆಗಳಿರುತ್ತವೆ. ದಿನಕ್ಕೆ ಒಂದು ಉತ್ತಮ ಅಭ್ಯಾಸ ಸೇರಿಸಿ – ಪುಸ್ತಕ ಓದುವುದು, ನಡೆಯುವುದು, ಧ್ಯಾನ – ಇವು ನಿಮಗೆ ಹೊಸ ನಂಬಿಕೆ ಕೊಡುತ್ತವೆ.
- ಬೆಂಬಲ ಸ್ವೀಕರಿಸಿ: ನಿಮ್ಮ ನೋವನ್ನು ಒಳಗೆ ಇಟ್ಟುಕೊಳ್ಳಬೇಡಿ. ಆತ್ಮೀಯರೊಂದಿಗೆ ಮಾತನಾಡಿ. ಒಬ್ಬ ಪ್ರಾಮಾಣಿಕ ಮಾತು, ಒಂದು ಆಲಿಸುವ ಕಿವಿ – ಕೆಲವೊಮ್ಮೆ ಮದ್ದು ಆಗಬಹುದು.
- ಬದಲಾವಣೆಯನ್ನ ಅಪ್ಪಿಕೊಳ್ಳಿ: ಜೀವನ ಸಿಧ್ದ ದಾರಿಯಲ್ಲ, ಅದು ಘಾಟ್ ಸೆಕ್ಷನ್‌ನಂತೆ ಏರಿಳಿತಗಳಿಂದ ಕೂಡಿದೆ. ಬದಲಾವಣೆಯನ್ನ ಸ್ವೀಕರಿಸಿ, ಪ್ರತಿಯೊಂದು ಅನುಭವದಿಂದ ಪಾಠ ಕಲಿಯಿರಿ. ಅಷ್ಟೇ ಬದುಕಿನ ಅರ್ಥ ಅರಿವಾಗುತ್ತದೆ.

