April 13, 2026
Monday, April 13, 2026
spot_img

ಧರ್ಮನಿಂದನೆ ಮಾಡಿದ್ರೆ ಜೀವಾವಧಿ ಶಿಕ್ಷೆ: ಪಂಜಾಬ್ ನಲ್ಲಿ ಜಾರಿಯಾಯ್ತು ಸ್ಟ್ರಿಕ್ಟ್ ರೂಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧಾರ್ಮಿಕ ನಂಬಿಕೆಗಳು ಮತ್ತು ಪವಿತ್ರ ಗ್ರಂಥಗಳ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಪಂಜಾಬ್ ಸರ್ಕಾರ ಮಹತ್ವದ ಹಾಗೂ ಕಠಿಣ ನಿರ್ಧಾರವೊಂದನ್ನು ಕೈಗೊಂಡಿದೆ. ಧರ್ಮನಿಂದನೆ ಪ್ರಕರಣಗಳಿಗೆ ಕಟ್ಟುನಿಟ್ಟಿನ ಶಿಕ್ಷೆ ನೀಡುವ ಉದ್ದೇಶದಿಂದ ಹೊಸ ತಿದ್ದುಪಡಿ ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದು ರಾಷ್ಟ್ರದ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಸರ್ಕಾರ “ಜಗತ್ ಜೋತ್ ಶ್ರೀ ಗುರು ಗ್ರಂಥ ಸಾಹಿಬ್ ಸತ್ಕಾರ್ (ತಿದ್ದುಪಡಿ) ಬಿಲ್–2026”ಗೆ ಒಪ್ಪಿಗೆ ಸೂಚಿಸಿದೆ. ಈ ಕಾನೂನಿನ ಪ್ರಕಾರ, ಸಿಖ್ ಸಮುದಾಯದ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ನ್ನು ಅಪವಿತ್ರಗೊಳಿಸಿದರೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸುವ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ 25 ಲಕ್ಷ ರೂಪಾಯಿವರೆಗೆ ಭಾರಿ ದಂಡ ವಿಧಿಸುವ ನಿಬಂಧನೆಯನ್ನೂ ಸೇರಿಸಲಾಗಿದೆ. ಈ ಅಪರಾಧವನ್ನು ಜಾಮೀನು ರಹಿತ ವರ್ಗಕ್ಕೆ ಸೇರಿಸಿರುವುದು ಕಾನೂನಿನ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ:

ಕಳೆದ ಕೆಲವು ವರ್ಷಗಳಲ್ಲಿ ಪಂಜಾಬ್‌ನಲ್ಲಿ ಧರ್ಮನಿಂದನೆ ಸಂಬಂಧಿತ ಘಟನೆಗಳು ಸಾಮಾಜಿಕ ಉದ್ವಿಗ್ನತೆಗೆ ಕಾರಣವಾಗಿದ್ದವು. ವಿಶೇಷವಾಗಿ 2015ರ ಬರ್ಗರಿ ಪ್ರಕರಣದ ಬಳಿಕ ಇಂತಹ ಕೃತ್ಯಗಳಿಗೆ ತಡೆ ಹಾಕಲು ಕಠಿಣ ಕಾನೂನು ಅಗತ್ಯ ಎಂಬ ಬೇಡಿಕೆ ಬಲವಾಗಿ ಕೇಳಿಬಂದಿತ್ತು. ಇದೇ ಹಿನ್ನೆಲೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಆದರೆ, ಈ ಮಸೂದೆ ಜಾರಿಗೆ ರಾಜ್ಯಪಾಲರ ಸಹಿ ಅಗತ್ಯವಿದ್ದು, ಕೆಲವು ಸಂದರ್ಭಗಳಲ್ಲಿ ರಾಷ್ಟ್ರಪತಿಗಳ ಅನುಮೋದನೆ ಬೇಕಾಗುವ ಸಾಧ್ಯತೆಯೂ ಇದೆ. ಹೀಗಾಗಿ ಕಾನೂನು ಜಾರಿಯಾಗುವ ಪ್ರಕ್ರಿಯೆ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !