ನಾವು ದಿನವಿಡೀ ಓಡುತ್ತಿರುತ್ತೇವೆ. ಕೆಲಸ, ಜವಾಬ್ದಾರಿ, ಕುಟುಂಬ, ಜನ, ನಿರೀಕ್ಷೆಗಳು ಎಲ್ಲರಿಗೂ ಸಮಯ ಕೊಡುತ್ತಾ ಕೊನೆಗೆ ನಮ್ಮದೇ ಪಾಲು ಖಾಲಿಯಾಗುತ್ತದೆ. “ನಂತರ ನೋಡೋಣ”, “ಇದಾದ ಮೇಲೆ ಮಾಡೋಣ” ಅನ್ನೋ ಮಾತುಗಳ ಮಧ್ಯೆ, ನಮಗೆ ಬೇಕಾದ ಸಮಯವನ್ನು ನಾವು ಮುಂದೂಡುತ್ತಲೇ ಇರುತ್ತೇವೆ. ಆದರೆ ಸತ್ಯ ಏನಂದ್ರೆ, ಇರೋ ಒಂದು ಜೀವನದಲ್ಲಿ ನಮಗೋಸ್ಕರ ಟೈಮ್ ಕೊಡದೇ ಹೋಗೋದೇ ದೊಡ್ಡ ತಪ್ಪು.
ನಮಗೆ ಸಮಯ ಕೊಡುವುದು ಅಂದರೆ ಸ್ವಾರ್ಥವಲ್ಲ. ಅದು ಬದುಕು ಉಳಿಸಿಕೊಳ್ಳೋದು. ಸ್ವಲ್ಪ ಮೌನ, ಸ್ವಲ್ಪ ಒಂಟಿತನ, ಸ್ವಲ್ಪ ನಮ್ಮದೇ ಜೊತೆ ಇರುವ ಕ್ಷಣಗಳು ಇವೇ ನಮ್ಮನ್ನು ಮತ್ತೆ ಜೋಡಿಸುತ್ತವೆ. ಅವಿಲ್ಲದೆ ಬದುಕು ಹೊರಗಿನಿಂದ ಸರಿಯಾಗಿದ್ದರೂ, ಒಳಗಿನಿಂದ ಖಾಲಿಯಾಗತೊಡಗುತ್ತದೆ.
ನಾವು ಇತರರಿಗಾಗಿ ಬದಲಾಗುತ್ತೇವೆ, ನಗುತ್ತೇವೆ, ಅಳುತ್ತೇವೆ. ಆದರೆ ನಮ್ಮ ಆಯಾಸ, ನಮ್ಮ ನೋವು, ನಮ್ಮ ಮನಸ್ಸಿನ ಗದ್ದಲ ಇವನ್ನೆಲ್ಲಾ ಯಾರಿಗೂ ಹೇಳದೇ ಒಳಗೇ ಮುಚ್ಚಿಟ್ಟುಕೊಳ್ಳುತ್ತೇವೆ. ಹೀಗೆ ಹೋದಂತೆ, ನಾವು ಬದುಕನ್ನು ನಿಭಾಯಿಸುತ್ತೇವೇ ಹೊರತು ಅನುಭವಿಸುವುದಿಲ್ಲ.
ಒಮ್ಮೆ ನಿಂತು ಕೇಳಿಕೊಳ್ಳಬೇಕು “ನಾನು ಕೊನೆಯದಾಗಿ ನನ್ನಿಗೋಸ್ಕರ ಏನು ಮಾಡಿದೆ?” ಆ ಉತ್ತರ ಸಿಗದೇ ಇದ್ದರೆ, ಅದೇ ಎಚ್ಚರಿಕೆ. ನಮಗೆ ಸಮಯ ಕೊಡುವುದು ಎಂದರೆ ದೊಡ್ಡ ಪ್ರಯಾಣ, ದೊಡ್ಡ ಸಾಧನೆ ಅಲ್ಲ. ಕೆಲವೊಮ್ಮೆ ಒಂದು ನಿಶ್ಚಿಂತೆ ಉಸಿರು, ಒಂದು ಇಷ್ಟದ ಹಾಡು, ಒಂದು ಶಾಂತ ನಡಿಗೆ ಸಾಕು.
ಜೀವನ ಮತ್ತೆ ಮತ್ತೆ ಅವಕಾಶ ಕೊಡೋದಿಲ್ಲ. ನಾವು ಯಾವಾಗಲೂ ಎಲ್ಲರಿಗೂ ಲಭ್ಯವಾಗಿದ್ದರೆ, ನಮ್ಮನ್ನೇ ಕಳೆದುಕೊಳ್ಳುತ್ತೇವೆ. ಆದರೆ ಸ್ವಲ್ಪ ಸಮಯವನ್ನು ನಮಿಗೋಸ್ಕರ ಉಳಿಸಿಕೊಂಡರೆ, ಬದುಕು ಹೆಚ್ಚು ಸಮತೋಲನವಾಗುತ್ತದೆ.
ಇರೋ ಒಂದು ಜೀವನದಲ್ಲಿ, ಎಲ್ಲರಿಗೂ ಸಮಯ ಕೊಡೋದು ತಪ್ಪಲ್ಲ. ಆದರೆ ನಮಗೇ ಸಮಯ ಕೊಡದೇ ಹೋಗೋದು ಮಾತ್ರ ನಿಜವಾಗಿಯೂ ದೊಡ್ಡ ತಪ್ಪು.



